ಬಿಹಾರ ಚುನಾವಣೆಗೂ ಮುನ್ನ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಕೊಲೆ ಬೆದರಿಕೆ; ದೂರು ದಾಖಲು| Chirag Paswan

chirag
Published on

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನವೇ ಕೇಂದ್ರ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಪಕ್ಷದ ವಕ್ತಾರ ರಾಜೇಶ್ ಭಟ್ ತಿಳಿಸಿದ್ದಾರೆ. ಈ ಸಂಬಂಧ ಪಾಟ್ನಾದ ಸೈಬರ್ ಪೊಲೀಸ್ ಠಾಣೆಯಲ್ಲಿ ಪಕ್ಷದ ವಕ್ತಾರ ರಾಜೇಶ್ ಭಟ್ ದೂರು ದಾಖಲಿಸಿದ್ದು ತಕ್ಷಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಟ್ನಾ ಸೈಬರ್ ಪೊಲೀಸ್ ಠಾಣೆಯ ಡಿಎಸ್‌ಪಿ ನಿತೀಶ್ ಚಂದ್ರ ಧರಿಯಾ, “ಜುಲೈ 11 ರಾತ್ರಿ 9 ಗಂಟೆ ಸುಮಾರಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಜೀವ ಬೆದರಿಕೆ ಸಂದೇಶ ಬಂದಿದೆ. ಈ ಸಂಬಂಧ ಪಾಟ್ನಾ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.

'ಟೈಗರ್ ಮೆರಾಜ್ ಇಡಿಸಿ' ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಬೆದರಿಕೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಿಹಾರ ವಿಧಾನಸಭಾ ಚುನಾವಣೆ ಸಮಯದಲ್ಲಿ ಚಿರಾಗ್ ಪಾಸ್ವಾನ್‌ರ ಜನಪ್ರಿಯತೆ ಹೆಚ್ಚುತ್ತಿರುವುದೇ ಈ ಬೆದರಿಕೆಗೆ ಕಾರಣ ಎಂದು ರಾಜೇಶ್ ಭಟ್ ಆರೋಪಿಸಿದ್ದಾರೆ. ಈ ಕೃತ್ಯ ಕ್ರಿಮಿನಲ್ ಉದ್ದೇಶ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಸ್ಪಷ್ಟ ಸೂಚನೆ ಎಂದು ಅವರು ತಿಳಿಸಿದ್ದಾರೆ.

ಈ ಘಟನೆಯು ಬಿಹಾರದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸಿದ್ದು, ಪಾಸ್ವಾನ್ ಅವರ ಚುನಾವಣಾ ಭಾಗವಹಿಸುವಿಕೆಯ ಘೋಷಣೆಯ ಬಳಿಕ ಈ ಬೆದರಿಕೆ ಬಂದಿರುವುದು ಗಮನಾರ್ಹವಾಗಿದೆ. ಕಳೆದ ವಾರ ಸಾರನ್‌ನಲ್ಲಿ ಜನಸಂದಣಿಯನ್ನುದ್ದೇಶಿಸಿ ಮಾತನಾಡಿದ ಚಿರಾಗ್, ನಾನು ಬಿಹಾರದ ಜನರಿಗಾಗಿ, ನನ್ನ ಸಹೋದರ-ಸಹೋದರಿಯರಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವೆ. ಬಿಹಾರವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುವ ವ್ಯವಸ್ಥೆಯನ್ನು ನಿರ್ಮಿಸುವೆ ಎಂದು ಘೋಷಿಣೆ ಹೊರಡಿಸಿದ್ದರು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net