ವಿದೇಶಿ ಬದುಕಿನ ಮೋಹ ತಂದ ಸಾವು: ಆ ಕ್ಷಣ ಅಂಕಣ..

People going
Published on
ಗುಜರಾತ್​ನ ಗಾಂಧಿನಗರ ಜಿಲ್ಲೆಯ ಶಾಲೆಯೊಂದರಲ್ಲಿ ಜಗದೀಶ್ (42) ವಿಜ್ಞಾನದ ಶಿಕ್ಷಕನಾಗಿದ್ದ. ಆತ ತನ್ನ ಸಹ ಶಿಕ್ಷಕಿ ವೈಶಾಲಿ (39) ಯನ್ನು ಮದುವೆಯಾಗಿದ್ದು ಅವರಿಬ್ಬರಿಗೆ ವಿಹಾಂಗಿ (10) ಮತ್ತು ಧಾರ್ವಿುಕ್ (5) ಎಂಬ ಮಕ್ಕಳಿದ್ದರು. ಜಗದೀಶ್​ಗೆ ಸುಮಾರು 10 ಎಕರೆ ಜಮೀನಿದ್ದು ಅದರಿಂದಲೂ ತಕ್ಕಮಟ್ಟಿಗೆ ಆದಾಯ ಬರುತ್ತಿತ್ತು. ಒಂದು ದಿನ ಅವರ ಮನೆಗೆ ಅಮೆರಿಕದಲ್ಲಿದ್ದ ವೈಶಾಲಿಯ ಸೋದರ ಸಂಬಂಧಿ ಕಿಶೋರ್ ಬಂದ. ಆ ದೇಶದಲ್ಲಿನ ತನ್ನ ಸುಖೀ ಜೀವನವನ್ನು ರಸವತ್ತಾಗಿ ಬಣ್ಣಿಸಿದ. ಅಕ್ಷರ ಬರದಿದ್ದ ಹಲವಾರು ಭಾರತೀಯರೂ ಅಮೆರಿಕದಲ್ಲಿ ತಮ್ಮ ಜೀವನವನ್ನು ಕಟ್ಟಿಕೊಂಡು ಇಂದು ಲಕ್ಷಾಧೀಶರಾಗಿದ್ದಾರೆಂದ ಕಿಶೋರ್, ಈ ಸಣ್ಣ ಪಟ್ಟಣದಲ್ಲಿ ನೀನೇಕೆ ಜೀವ ಸವೆಸುತ್ತಿರುವೆ? ಕುಟುಂಬದೊಡನೆ ಅಮೆರಿಕಕ್ಕೆ ವಲಸೆ ಬಾ ಎಂದು ವೈಶಾಲಿಯ ತಲೆಯಲ್ಲಿ ಹುಳವನ್ನು ಬಿಟ್ಟ.

ತಾವೂ ಅಮೆರಿಕಕ್ಕೆ ವಲಸೆ ಹೋಗಬೇಕೆಂಬ ಬಯಕೆ ವೈಶಾಲಿಗೆ ಅಂದೇ ಚಿಗುರಿ ದಿನಕಳೆದಂತೆಲ್ಲಾ ಮರವಾಗುತ್ತಾ ಬೆಳೆಯಿತು. ತನ್ನ ಗಂಡನನ್ನು ಆಕೆ ಈ ಬಗ್ಗೆ ಎಡಬಿಡದೆ ಕಾಡತೊಡಗಿದಳು. ಅವಳ ಕಾಟಕ್ಕೆ ಮಣಿದ ಜಗದೀಶ್, ಅಮೆರಿಕಕ್ಕೆ ವಲಸೆ ಹೋಗುವುದು ಹೇಗೆಂದು ತಿಳಿಯಲು ರಾಜಧಾನಿಯಲ್ಲಿದ್ದ ಟ್ರಾವೆಲ್ ಏಜೆಂಟ್ ಒಬ್ಬನ ಬಳಿಗೆ ಹೋದ. ಆತ ಅಲ್ಲಿಗೆ ವಲಸೆ ಹೋಗುವುದು ಬಹಳ ಕಷ್ಟ. ಪ್ರವಾಸಿ ವೀಸಾ ಸಿಗಬೇಕಾದರೆ ಹಲವಾರು ವರ್ಷ ಕಾಯಬೇಕಾದ ಪರಿಸ್ಥಿತಿಯಿದೆ. ಬೇಕೆಂದರೆ ಯಾವುದಾದರೂ ಕೊಲ್ಲಿ ರಾಷ್ಟ್ರಕ್ಕೆ ವಲಸೆ ಹೋಗಲು ಅನುಕೂಲ ಮಾಡಿಕೊಡುವೆ ಎಂದ. ಊರಿಗೆ ವಾಪಸ್ ಆದ ಜಗದೀಶ್ ವೈಶಾಲಿಗೆ ಅಮೆರಿಕದ ಕನಸನ್ನು ತೊರೆಯಲು ಹೇಳಿದ. ಆದರೆ ಆಕೆ ಕೇಳಬೇಕಲ್ಲ? ನಮ್ಮ ಪಟ್ಟಣದಿಂದಲೇ ಸುಮಾರು 15 ಕುಟುಂಬಗಳು ಅಮೆರಿಕ, ಕೆನಡಾಗಳಿಗೆ ವಲಸೆ ಹೋಗಿವೆ, ಅವರನ್ನು ವಿಚಾರಿಸಿ ಬರುವೆ ಎಂದು ಅಂತಹವರೊಬ್ಬರ ಮನೆಗೆ ಹೋದಳು. ಇಮಿಗ್ರೆಂಟ್ ವೀಸಾ ಪಡೆದು ಅಲ್ಲಿಗೆ ಹೋಗುವುದು ಅಸಾಧ್ಯವೇ. ಆದರೆ ನನಗೆ ತಿಳಿದಿರುವ ಒಂದು ಕುಟುಂಬ ಆರು ತಿಂಗಳ ಹಿಂದೆ ಏಜೆಂಟರ ಮೂಲಕ ಅಮೆರಿಕಗೆ ಅಕ್ರಮವಾಗಿ ವಲಸೆ ಹೋಗಿ ಅಲ್ಲಿ ಆರಾಮಾಗಿ ಜೀವನ ಸಾಗಿಸುತ್ತಿದೆ. ನಾನು ಅವರಿಂದ ಮಾಹಿತಿಯನ್ನು ಪಡೆದು ನಿನಗೆ ತಿಳಿಸುವೆ ಎಂದು ಹೇಳಿ ಕೆಲವು ದಿನಗಳ ನಂತರ ಏಜೆಂಟ್ ಒಬ್ಬನ ವಿಳಾಸವನ್ನು ಕೊಟ್ಟಳು.

ಪತಿ ಪತ್ನಿಯರಿಬ್ಬರೂ ಆ ಏಜೆಂಟ್​ನನ್ನು ಸಂರ್ಪಸಿದರು. ನಿಮ್ಮನ್ನು ಅಮೆರಿಕಕ್ಕೆ ಕಳುಹಿಸುವುದು ಕಷ್ಟವಲ್ಲ, ಆದರೆ ಅಲ್ಲಿಗೆ ವೀಸಾ ಸಿಗದಿರುವುದರಿಂದ ನಿಮ್ಮನ್ನು ಅಕ್ರಮವಾಗಿ ಬೇರೆ ದೇಶದ ಮೂಲಕವೇ ಕಳಿಸಬೇಕು. ಅದಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ ಮತ್ತು ಬಹಳ ರಿಸ್ಕ್ ಇದೆ. ನಿಮ್ಮ ಕುಟುಂಬದ ನಾಲ್ಕು ಜನ ಹೋಗಬೇಕಾದರೆ ಸುಮಾರು ಒಂದು ಕೋಟಿ ರೂ. ಖರ್ಚಾಗುತ್ತದೆ. ಅಷ್ಟು ಹಣವನ್ನು ನೀವು ಕೊಡಲು ಮತ್ತು ಅಮೆರಿಕದಲ್ಲಿ ನಿಮ್ಮೆಲ್ಲರ ಬಂಧನವಾಗುವ ಚಾನ್ಸ್ ತೆಗೆದುಕೊಳ್ಳಲು ತಯಾರಾಗಿದ್ದರೆ ಮುಂದಿನ ವಾರ ನಿಮ್ಮ ಪಾಸ್​ಪೋರ್ಟ್​ಗಳ ಜತೆಗೆ ಇಲ್ಲಿಗೆ ಬನ್ನಿ ಎಂದ. ಹಾಗಾದರೆ ಬೇಡ ಎಂದು ಜಗದೀಶ್ ಹೇಳಿದಾಗ, ನೀವು ವಾಸ್ತವವನ್ನು ತಿಳಿಯಲಿ ಎನ್ನುವ ಕಾರಣಕ್ಕೇ ನಾನು ರಿಸ್ಕ್ ಎಂದದ್ದು. ಆದರೆ ಇದೇ ಜಿಲ್ಲೆಯಿಂದಲೇ ನಾನು 23 ಜನರನ್ನು ಅಲ್ಲಿಗೆ ಕಳಿಸಿರುವೆ, ಏನೂ ಪ್ರಾಬ್ಲಂ ಆಗಿಲ್ಲ ಎಂದು ಧೈರ್ಯವನ್ನೂ ತುಂಬಿದ.

ನಂತರ ಜಗದೀಶ್ ತನ್ನ ಜಮೀನನ್ನು ಮಾರಿ ಹಣವನ್ನು ಹೊಂದಿಸಿಕೊಂಡು ಆ ಏಜೆಂಟ್​ನನ್ನು ಸಂರ್ಪಸಿದ. ನಾನು ನಿಮ್ಮನ್ನು ಕೆನಡಾ ದೇಶದ ಮೂಲಕವೇ ಅಮೆರಿಕಕ್ಕೆ ಕಳುಹಿಸುವುದು. ಆದರೆ ಕೆನಡಾಗೆ ವೀಸಾ ಸಿಗುವುದೂ ಅಷ್ಟೇನೂ ಸುಲಭವಲ್ಲ. ಹೀಗಾಗಿ ಕೆಲದಿನಗಳ ನಂತರ ನಿಮ್ಮನ್ನು ಇಂಡೊನೇಷಿಯಾ ಪ್ರವಾಸಕ್ಕೆ ಕಳಿಸಿ ಅದಾದ 3 ತಿಂಗಳ ನಂತರ ಕೆನಡಾಕ್ಕೆ ಕಳಿಸುವೆ ಎಂದ ಆತ ಆ ಕುಟುಂಬವನ್ನು 5 ದಿನಗಳ ಪ್ರವಾಸಕ್ಕಾಗಿ ಜಕಾರ್ತ ಮತ್ತು ಬಾಲಿಗೆ ಕಳಿಸಿದ. ಅಲ್ಲಿಂದ ಅವರು ವಾಪಸ್ ಬಂದ ನಂತರ ಅವರನ್ನು ಶ್ರೀಲಂಕಾ ಪ್ರವಾಸಕ್ಕೆ ಕಳಿಸಿದ. ಆನಂತರ ಅವರಿಂದ ಕೆನಡಾದ ವೀಸಾಕ್ಕೆ ಅರ್ಜಿ ತುಂಬಿಸಿದ. ವೀಸಾಕ್ಕಾಗಿ ಕೆನಡಾದಲ್ಲಿರುವ ಒಬ್ಬ ಗುಜರಾತಿ ಮೂಲದ ವ್ಯಕ್ತಿಯಿಂದ ಪ್ರವಾಸದ ಆಮಂತ್ರಣ ಕೊಡಿಸಿದ. ಕೆನಡಾದ ವೀಸಾ ದೊರೆತ ಕೂಡಲೇ ಅವರನ್ನು ಕೊಲಂಬೋ ಮೂಲಕ ಕೆನಡಾದ ಟೊರಾಂಟೊಗೆ ಕಳಿಸಿದ.

ಜಗದೀಶ್ ಮತ್ತವನ ಕುಟುಂಬವನ್ನು ಟೊರಾಂಟೋ ವಿಮಾನ ನಿಲ್ದಾಣದಲ್ಲಿ ಎದುರುಗೊಂಡ ಭಾರತೀಯನೊಬ್ಬ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಎರಡು ದಿನಗಳನ್ನು ಕಳೆಯಲು ಹೇಳಿದ. ಕೆನಡಾ ತುಂಬಾ ಚಳಿಯಿರುವ ದೇಶ. ಹೀಗಾಗಿ ನೀವೆಲ್ಲರೂ ಸೂಕ್ತವಾದ ಬಟ್ಟೆಗಳನ್ನು ತೊಡಬೇಕು ಎಂದು ಅವರೆಲ್ಲರನ್ನೂ ಅಂಗಡಿಗೆ ಕರೆದೊಯ್ದು ಬೆಚ್ಚನೆಯ ಬಟ್ಟೆಗಳನ್ನು ಕೊಡಿಸಿದ. ಆನಂತರ ಅವರನ್ನು ಇನ್ನೊಬ್ಬ ಭಾರತೀಯ ಮೂಲದ ವ್ಯಕ್ತಿಗೆ ಭೇಟಿ ಮಾಡಿಸಿ ಅಮೆರಿಕ ದೇಶದ ಗಡಿಭಾಗಕ್ಕೆ ಹೋಗುವ ಪ್ರಯಾಣವನ್ನು ಆತ ಮಾಡಿಸುವನೆಂದು ತಿಳಿಸಿದ. ಮಾರನೆಯ ದಿನ ಜಗದೀಶ್ ತನ್ನ ಕುಟುಂಬದೊಡನೆ ಟೊರಾಂಟೋದಿಂದ ಆ ಏಜೆಂಟನ ಜತೆಗೆ ಎಮರ್​ಸನ್ ಎನ್ನುವ ಊರಿಗೆ ಕಾರಿನಲ್ಲಿ ಹೊರಟ. ಆಗ ಜನವರಿ ತಿಂಗಳಾದ್ದರಿಂದ ಆ ದೇಶದಲ್ಲಿ ಎಷ್ಟು ಚಳಿಯಿತ್ತೆಂದರೆ ಕಾರಿನಲ್ಲಿ ಹೀಟರ್ ಹಾಕಿದರೂ ಪ್ರಯೋಜನವಾಗುತ್ತಿರಲಿಲ್ಲ. ಟೊರಾಂಟೋದಿಂದ ಎಮರ್​ಸನ್​ಗೆ ಹೋಗಲು ಸುಮಾರು 22 ಗಂಟೆಗಳಾಗುತ್ತಿತ್ತು. ಹೀಗಾಗಿ ಅವರೆಲ್ಲರೂ ಮಾರ್ಗಮಧ್ಯದಲ್ಲಿರುವ ಸಣ್ಣ ಊರೊಂದರಲ್ಲಿ ರಾತ್ರಿಯ ವಸತಿ ಮಾಡಿದರು. ಮಾರನೆಯ ದಿನ ಬೆಳಿಗ್ಗೆ ಅಲ್ಲಿಂದ ಹೊರಟು ಸಂಜೆಗೆ ಎಮರಸನ್ ತಲುಪಿದರು. ಅಲ್ಲಿನ ಹೋಟೆಲ್ ಒಂದರಲ್ಲಿ ಅವರನ್ನು ಇಳಿಸಿದ ಏಜೆಂಟ್ ಅವರಂತೆಯೇ ವೀಸಾ ಇಲ್ಲದೆಯೇ ಅಮೆರಿಕಕ್ಕೆ ಹೋಗಲು ಬಂದಿದ್ದ ಏಳು ಜನ ಇತರ ಭಾರತೀಯರನ್ನು ಅವರಿಗೆ ಪರಿಚಯ ಮಾಡಿಸಿದ.

ಆನಂತರ ಅವರೆಲ್ಲರನ್ನೂ ಉದ್ದೇಶಿಸಿ, ಈ ಊರು ಕೆನಡಾ ಮತ್ತು ಅಮೇರಿಕದ ಗಡಿಯಲ್ಲಿದೆ. ಇದೇ ಹೈವೇನಲ್ಲಿ ಸುಮಾರು 10 ಕಿ.ಮೀ ಕಾರಿನಲ್ಲಿ ಹೋದರೆ ನೀವು ಅಮೆರಿಕದ ಗಡಿ ಚೆಕ್ ಪೋಸ್ಟ್ ತಲಪುವಿರಿ. ನಿಮ್ಮ ಬಳಿ ಅಮೆರಿಕದ ವೀಸಾ ಇಲ್ಲದ ಕಾರಣ ನಾನು ನಿಮ್ಮನ್ನು ಕಳ್ಳದಾರಿಯಲ್ಲಿ ಅಮೆರಿಕಕ್ಕೆ ಮುಟ್ಟಿಸುತ್ತೇನೆ. ಎರಡೂ ದೇಶಗಳ ಗಡಿ ಭಾಗದಲ್ಲಿ ಒಂದು ನದಿಯಿದೆ. ಈಗ ಅದು ಹೆಪ್ಪುಗಟ್ಟಿರುವುದರಿಂದ

ನೀವು ಅದರ ಮೇಲೆ ಸುಲಭವಾಗಿ ನಡೆದುಕೊಂಡು ಹೋಗಿ ಅಮೆರಿಕ ತಲುಪಬಹುದು. ನಾಳೆ ಬೆಳಿಗ್ಗೆ ನಾನು ನಿಮ್ಮನ್ನು ನಮ್ಮ ದೇಶದ ನದಿ ದಡಕ್ಕೆ ಮುಟ್ಟಿಸುವೆ. ನೀವು ನದಿ ದಾಟಿದ ನಂತರ ಇನ್ನೊಬ್ಬ ಏಜೆಂಟ್ ಭೇಟಿಯಾಗಿ ನಿಮ್ಮನ್ನು ಮುಂದಿನ ತಾಣಕ್ಕೆ ಮುಟ್ಟಿಸುತ್ತಾನೆ ಎಂದ.

2022 ಜನವರಿ 19 ರಂದು ಜಗದೀಶ್ ಕುಟುಂಬವೂ ಸೇರಿದಂತೆ 11 ಜನ ಭಾರತೀಯರು ತಮ್ಮ ಹೋಟೆಲ್ಲಿನಿಂದ ಏಜೆಂಟನ ವ್ಯಾನಿನಲ್ಲಿ ಹೊರಟರು. ಅವರನ್ನು ರಸ್ತೆಯ ಪಕ್ಕದಲ್ಲಿದ್ದ ಒಂದು ಜಾಗದಲ್ಲಿ ಇಳಿಸಿದ ಆತ ಅವರು ಕ್ರಮಿಸಬೇಕಾದ ದಾರಿಯನ್ನು ತೋರಿಸಿ, ಇದೇ ಹಾದಿಯಲ್ಲಿ ನೇರವಾಗಿ ಒಂದೇ ಕಿ.ಮೀ ನಡೆದರೆ ಅಮೆರಿಕ ಮುಟ್ಟುವಿರಿ, ಎನ್ನುತ್ತಾ ಹೊರಟುಹೋದ. ಅದೊಂದು ದೊಡ್ಡ ಬಯಲು ಪ್ರದೇಶವಾಗಿದ್ದು ಸುಯ್್ಯ ಎಂದು ಚಳಿಗಾಳಿ ರಭಸದಿಂದ ಬೀಸುತ್ತಿತ್ತು. ಆಗ -35 ಡಿಗ್ರಿ ಸೆಲ್ಷಿಯಸ್ ತಾಪಮಾನವಿತ್ತು. (ಮಾನವ ದೇಹದ ಉಷ್ಣಾಂಶ +37 ಡಿಗ್ರಿ) ಹೀಗಾಗಿ ಅವರು ಧರಿಸಿದ್ದ ಬೆಚ್ಚನೆಯ ಬಟ್ಟೆಗಳು ಆ ಪರಿಯ ಚಳಿಯನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ. ನೆಲದ ಮೇಲೆ ಒಂದು ಅಡಿಯಷ್ಟು ಹಿಮವಿದ್ದದ್ದರಿಂದ

ಹೆಜ್ಜೆಗಳು ಜಾರುತ್ತಿದ್ದವು. ಜತೆಗೆ ಕೈಗಳಲ್ಲಿ ಬ್ಯಾಗುಗಳಿದ್ದಿದ್ದರಿಂದ ಬೇಗಬೇಗನೇ ನಡೆಯಲಾಗುತ್ತಿರಲಿಲ್ಲ. ಜಗದೀಶ್​ನ ಮಗನಂತೂ ಸ್ವಲ್ಪ ದೂರ ನಡೆದ ಬಳಿಕ ತಾನಿನ್ನು ನಡೆಯಲಾರೆನೆಂದು ಹೇಳಿ ತನ್ನಮ್ಮನನ್ನು ಎತ್ತಿಕೊಳ್ಳಲು ಹೇಳಿದ. ಇಷ್ಟರಲ್ಲಿ ಅವರ ಜತೆಗಿದ್ದ ಇತರರು ಬೇಗಬೇಗನೇ ಮುಂದೆ ಸಾಗಿ ಕಣ್ಮರೆಯಾದರು. ಇನ್ನು ಸ್ವಲ್ಪವೇ ದೂರ ನಡೆದರೆ ಗುರಿ ಮುಟ್ಟುವೆವು ಎಂದು ಮಕ್ಕಳಿಗೆ ಹುರಿದುಂಬಿಸಿದ ಜಗದೀಶ್ ಸ್ವಲ್ಪ ದೂರ ನಡೆದನಂತರ ತಾವು ಯಾವ ದಿಕ್ಕಿನಲ್ಲಿ ಕ್ರಮಿಸುತ್ತಿದ್ದೇವೆ ಎನ್ನುವುದನ್ನು ಅರಿಯದಾದ. ಅವರ ಪ್ರಯಾಣ ಪ್ರಯಾಸದಿಂದ ಮುಂದುವರೆಯಿತು.

ಏತನ್ಮಧ್ಯೆ ಅದೇ ಸಂಜೆ ಅಮೆರಿಕದ ಗಡಿ ರಕ್ಷಣಾ ಪಡೆಯ ಸಿಬ್ಬಂದಿ ತಮ್ಮ ಗಡಿ ಭಾಗದ ರಸ್ತೆಯ ಮೇಲೆ ನಡೆದುಹೋಗುತ್ತಿದ್ದ 7 ಜನ ಭಾರತೀಯರನ್ನು ಕಂಡರು. ಅವರ ಬಳಿ ಅಮೆರಿಕದ ವೀಸಾ ಇಲ್ಲದ್ದ ಕಾರಣ ಅವರನ್ನು ಬಂಧಿಸಿ ಪ್ರಶ್ನೆ ಮಾಡಿದರು. ಅವರು ನಿಜವನ್ನು ಹೇಳಿ, ಈ ರಸ್ತೆಯಲ್ಲಿ ನಮ್ಮನ್ನು ಕರೆದೊಯ್ಯಲು ಒಂದು ವ್ಯಾನ್ ಬಂದಿರುತ್ತದೆ, ಅದರಲ್ಲಿ ನಮಗಾಗಿ ಕಾಯುತ್ತಿರುವ ಏಜೆಂಟ್​ನನ್ನು ನಾವು ಹುಡುಕುತ್ತಿದ್ದೆವು ಎಂದರು. ಪೋಲೀಸರು ಅದೇ ಹಾದಿಯಲ್ಲಿ ಒಂದು ವ್ಯಾನ್ ನಿಂತಿದ್ದನ್ನು ಕಂಡರು. ಅದರಲ್ಲಿ ಮೂರು ಜನರಿದ್ದರು. ಚಾಲಕ ಅಮೆರಿಕದ ನಾಗರಿಕನಾಗಿದ್ದು ಪ್ರಯಾಣಿಕರು ಭಾರತೀಯರಾಗಿದ್ದರು. ಭಾರತೀಯರ ಬಳಿಯಲ್ಲಿಯೂ ವೀಸಾ ಇರಲಿಲ್ಲ. ಅವರೆಲ್ಲರನ್ನೂ ಬಂಧಿಸಲಾಯಿತು.

ಮುಂದಿನ ವಿಚಾರಣೆಯಲ್ಲಿ ಅಮೆರಿಕದ ಪೊಲೀಸರಿಗೆ 11 ಜನರಿದ್ದ ಭಾರತೀಯ ಗುಂಪಿನಲ್ಲಿ ಒಂದೇ ಕುಟುಂಬದ 4 ಜನರು ನಾಪತ್ತೆಯಾಗಿರುವರೆಂದು ತಿಳಿಯಿತು. ಕಾಣೆಯಾದ ಕುಟುಂಬಕ್ಕಾಗಿ ಹುಡುಕಾಟ ಪ್ರಾರಂಭವಾಯಿತು. ಮಾರನೆಯ ಬೆಳಿಗ್ಗೆ ಕೆನಡಾ ವ್ಯಾಪ್ತಿಯ ಗಡಿ ಭಾಗದಲ್ಲಿ, ಅಮೆರಿಕದ ಗಡಿಗೆ 10 ಮೀಟರ್ ದೂರದಲ್ಲಿ ಜಗದೀಶ್ ಹಾಗೂ ಅವನ ಕುಟುಂಬದವರೆಲ್ಲರ ಮೃತ ದೇಹಗಳು ದೊರೆತವು. ಚಳಿ ಮತ್ತು ವಿಶ್ವದೆಲ್ಲೆಡೆ ದೊಡ್ಡ ಸವಾಲಾಗಿರುವ ಮಾನವ ಕಳ್ಳಸಾಗಣೆಯ ಕ್ರೂರ ಜಾಲ ಅವರ ಜೀವದ ಬಲಿಯನ್ನು ಪಡೆದಿತ್ತು. ಜಗದೀಶ್ ಕುಟುಂಬದ ಸಾವಿಗೆ ಕಾರಣರಾದವರನ್ನು ಪತ್ತೆ ಮಾಡಲು ಅಮೆರಿಕ, ಕೆನಡಾ ಮತ್ತು ಭಾರತ ಜಂಟಿ ಕಾರ್ಯಾಚರಣೆಗಳನ್ನು ನಡೆಸಿದವು. ಪೊಲೀಸರು ತಂತಮ್ಮ ದೇಶಗಳಲ್ಲಿ ತಲಾ ಒಬ್ಬ ಎಜೆಂಟನನ್ನು ಬಂಧಿಸಿದರು. ಅವರಲ್ಲೊಬ್ಬ ಬಿಡುಗಡೆಯಾಗಿದ್ದರೆ ಇನ್ನೊಬ್ಬನಿಗೆ ಎರಡು ವರ್ಷಗಳ ಸಜೆಯಾಗಿದೆ. ಭಾರತದಲ್ಲಿನ ಎಜೆಂಟ್ ವಿಚಾರಣೆಯನ್ನು ಕಾಯುತ್ತಾ ಜೈಲಿನಲ್ಲಿದ್ದಾನೆ. ಈ ದೇಶವಲ್ಲವೆಂದಾದೇಶಕೆ ಹೋದರೆ ಹೋದ ಶೂದ್ರಿಕನ ತಲೆ ಕಂಚಿಯಾಲದೊಳು ವೇಧಿಸಿತು ನೋಡ ಸರ್ವಜ್ಞ ಎನ್ನುವಂತಾಯಿತು ಆ ಕುಟುಂಬದ ಪರಿಸ್ಥಿತಿ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net