ಮುಂಬೈ: ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಮೂಕ್ಯವಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ರನ್ನು ಜನ ಹಾಡಿ ಹೊಗಳುತ್ತಿದ್ದಾರೆ. ಇತ್ತ ಟೀಮ್ ಇಂಡಿಯಾ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಳ್ಳುವುದು ಖಚಿತವಾಗುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ ರಾಹುಲ್ ದ್ರಾವಿಡ್ ಅವರನ್ನು ಉದ್ಧೇಶಿಸಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.
ಸ್ಟಾರ್ಡಮ್ಅನನ್ಉ ಡ್ರೆಸ್ಸಿಂಗ್ ರೂಮ್ನ ಹೊರಗೆ ಬಿಟ್ಟು ನಮ್ಮ ಕೌಶಲ್ಯಗಳನ್ನು ಅಭಿವೃದ್ದಿಪಡಿಸಿದ್ದಕ್ಕಾಗಿ ಧನ್ಯವಾದಗಳು. ರಾಹುಲ್ ಭಾಯ್ ನಿಮ್ಮ ಮಾರ್ಗದರ್ಶನದಲ್ಲಿ ಕಪ್ ಗೆದ್ದಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ರಾಹುಲ್ ಭಾಯ್, ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸರಿಯಾದ ಪದಗಳು ಸಿಗುತ್ತಿಲ್ಲ. ನಾನು ಸರಿಯಾಗಿ ಮಾಡುತ್ತೇನೋ ಇಲ್ಲವೋ ಆದರೂ ಒಂದು ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಬಾಲ್ಯದ ದಿನಗಳಿಂದ ನಾನು ಶತಕೋಟಿ ಭಾರತೀಯರಂತೆ ನಿಮ್ಮನ್ನು ನೋಡುತ್ತಿದ್ದೆ. ಆದರೆ ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಸಾಕಷ್ಟು ಅದೃಷ್ಟಶಾಲಿಯಾಗಿದ್ದೆ. ನೀವು ಈ ಕ್ರೀಡೆಯ ಮೇರು ವ್ಯಕ್ತಿತ್ವ. ನಿಮ್ಮ ಎಲ್ಲ ಸಾಧನೆಗಳನ್ನು ಬದಿಗಿಟ್ಟು ಕೋಚ್ ಆಗಿ ನಮ್ಮ ಹಂತಕ್ಕೆ ಇಳಿದು ನಮಗೆ ಮಾರ್ಗದರ್ಶನ ನೀಡಿದ್ದೀರಿ ಎಂದಷ್ಟೇ ಹೇಳಬಲ್ಲೆ. ಅದು ಈ ಆಟಕ್ಕೆ ನೀವು ನೀಡುವ ಕೊಡುಗೆ, ಗೌರವ ಮತ್ತು ಪ್ರೀತಿಯಾಗಿದೆ.
ಇದನ್ನೂ ಓದಿ: ಮಕ್ಕಳಿಗೆ ಉತ್ತಮ ಭವಿಷ್ಯ ನೀಡಲು ಕಿಡ್ನಿ ಮಾರಿದ ತಂದೆ; ಆ ಬಳಿಕ ನಡೆದಿದ್ದೆ ಬೇರೆ…
ನಿಮ್ಮಿಂದ ನಾನು ಬಹಳಷ್ಟನ್ನು ಕಲಿತಿದ್ದೇನೆ. ಆ ಒಂದೊಂದು ಕ್ಷಣವೂ ನೆನಪಿನಲ್ಲಿರುತ್ತದೆ. ನಿಮ್ಮ ಸಾಧನೆಯಲ್ಲಿ ಇದೊಂದು ಕೊರತೆ ಕಾಡುತ್ತಿತ್ತು. ನಾವಿಬ್ಬರೂ ಒಟ್ಟಿಗೆ ಇದನ್ನು ಸಾಧಿಸಿದ್ದಕ್ಕೆ ಸಂತಸವಿದೆ. ರಾಹುಲ್ ಭಾಯ್ ನಿಮ್ಮನ್ನು ನನ್ನ ವಿಶ್ವಾಸಿ, ನನ್ನ ಕೋಚ್ ಮತ್ತು ನನ್ನ ಸ್ನೇಹಿತ ಎಂದು ಕರೆಯುವುದಕ್ಕೆ ನಾನು ಅತ್ಯಂತ ಸೌಭಾಗ್ಯಶಾಲಿ. ನನ್ನ ಪತ್ನಿ ರಿತಿಕಾ ನಿಮ್ಮನ್ನು ನನ್ನ ಕೆಲಸದ ಹೆಂಡತಿ ಎಂದು ಕರೆಯುತ್ತಾರೆ ಮತ್ತು ನಿಮ್ಮನ್ನು ನನ್ನ ಜೊತೆ ಆ ರೀತಿ ಕರೆಯುವುದು ಅದೃಷ್ಟವಾಗಿದೆ ಎಂದು ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
3 ವರ್ಷಗಳಿಂದ ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ದ್ರಾವಿಡ್ ಅವರ ಅಧಿಕಾರಾವಧಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ–20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಅಂತ್ಯಗೊಂಡಿತ್ತು. ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಶೀಘ್ರದಲ್ಲೇ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.