

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ ಇತ್ತೀಚೆಗೆ ಅಡಕೆ ತೋಟಗಳಲ್ಲಿ ಚೆಂಡೆಕೊಳೆ ರೋಗ ಕಾಣಿಸಿಕೊಳ್ಳುತ್ತಿದ್ದು, ಬಾಧಿತ ಮರಗಳು ಸಾಯುತ್ತಿರುವುದರಿಂದ ಕೃಷಿಕರಿಗೆ ಭಾರಿ ನಷ್ಟವುಂಟಾಗುತ್ತಿದೆ. ಇದು ಕೃಷಿಕರ ಆತಂಕಕ್ಕೂ ಕಾರಣವಾಗಿದೆ.
ಅಡಕೆ ಕೊಳೆ ರೋಗಕ್ಕೆ ಕಾರಣವಾಗುವ ಪೈಟೋಪ್ತೆರಾ ಮಿಡಿಯೈ ಶಿಲೀಂಧ್ರವೇ ಈ ರೋಗಕ್ಕೂ ಕಾರಣವಾಗಿದ್ದು, ಹೆಚ್ಚು ಕಾಯಿಕೊಳೆ ಬಾಧಿತ ತೋಟಗಳಲ್ಲಿ ಈ ರೋಗ ಕಂಡು ಬರುತ್ತದೆ. ಇದು ಅಗಸ್ಟ್ ಅಥವಾ ಸೆಪ್ಟೆಂಬರ್‌ನಿಂದ ಡಿಸೆಂಬರ್ ಅಥವಾ ಜನವರಿ ತನಕ ಇರುತ್ತದೆ.
ಹಳೇ ಅಡಕೆ ಮರಗಳಲ್ಲೇ ಈ ರೋಗ ಹೆಚ್ಚಾಗಿ ಕಂಡುಬರುತ್ತಿದ್ದು, ಕೊಳೆರೋಗ ನಿಯಂತ್ರಣ ಕ್ರಮಗಳನ್ನು ಸೂಕ್ತವಾಗಿ ಅನುಸರಿಸಿದವರ ತೋಟಗಳಲ್ಲಿ ಈ ಬಾಧೆ ಕಡಿಮೆ. ಪ್ರಾರಂಭಿಕ ಹಂತದಲ್ಲೇ ರೋಗ ಬಾಧಿತ ಮರಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಅನುಸರಿಸಿದರೆ ಮರಗಳನ್ನು ಉಳಿಸಿಕೊಳ್ಳಬಹುದು. ಸಮರ್ಪಕ ಬಸಿಗಾಲುವೆಗಳ ನಿರ್ವಹಣೆ, ಶೀಫಾರಸು ಮಾಡಿದ ಪೋಷಕಾಂಶಗಳನ್ನು ನಿಯಮಿತವಾಗಿ ನೀಡುವುದರಿಂದ ರೋಗ ತಡೆ ಸಾಧ್ಯ.
ಕೊಳೆರೋಗ ಬಾಧಿತ ಸಿಂಗಾರ ನಾಶಮಾಡಬೇಕು. ಇದರ ಜತೆಗೆ ಚೆಂಡೆ ಕೊಳೆಬಾಧೆಗೊಳಗಾಗಿ ಸತ್ತ ಮರಗಳನ್ನು ಕತ್ತರಿಸಬೇಕು. ಮರಗಳ ಕುಬೆ ಭಾಗಕ್ಕೆ ಬೋರ್ಡೊ ಪೇಸ್ಟ್ ಹಚ್ಚಬೇಕು.ಜತೆಗೆ ಸುತ್ತಲಿನ ಮರಗಳ ಕುಬೆಗಳಿಗೆ ಕೂಡ ಬೋರ್ಡೊ ಸಿಂಪಡಿಸಬೇಕು. ಪ್ರಾರಂಭಿಕ ಹಂತದ ರೋಗ ಲಕ್ಷಣ ಹೊಂದಿರುವ ಮರಗಳ ಎಲೆಗಳಿಗೆ ಮೆಟಾಲಾಕ್ಸಿಲ್ ಸಿಂಪಡಿಸಬೇಕು. ಬೋರ್ಡೊವನ್ನು ಮಳೆಗಾಲ ಮುನ್ನ ಹಾಗೂ ಮಳೆ ಆರಂಭವದ ಬಳಿಕವೂ ಬಿಸಿಲಿನ ಅವಧಿ ವೇಳೆ ಸಿಂಪಡಿಸಬೇಕು.
ಪ್ರಾರಂಭದ ಹಂತದಲ್ಲಿ ಹಸಿರು ಗರಿಗಳು ಜೋತು ಬೀಳುತ್ತವೆ. ಕ್ರಮೇಣ ಅವುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಸುಳಿ ಗರಿ ತುಂಬಾ ಸಮಯ ಹಸಿರಾಗಿ ಉಳಿದು ಬಳಿಕ ಒಣಗಿ ಚೆಂಡೆ ಭಾಗ ಕಳಚಿ ಬೀಳುತ್ತದೆ. ಅಡಕೆ ಹಾಳೆಯ ಒಳ ಬುಡ ಭಾಗ ಕಂದು ಬಣ್ಣದ ಭಾಗಕ್ಕೆ ಬದಲಾಗುತ್ತದೆ. ಅಡಕೆ ಹಾಳೆಯು ಕಾಂಡಕ್ಕೆ ಅಂಟಿಕೊಳ್ಳುವ ಭಾಗದಲ್ಲಿ ಶಿಲೀಂಧ್ರ ಪ್ರವೇಶಿಸಿ ಕಾಂಡದ ಒಳಭಾಗ ಪೂರ್ಣ ಕೊಳೆಯುವಂತೆ ಮಾಡುತ್ತದೆ.
ಚೆಂಡೆ ಕೊಳೆರೋಗದಿಂದ ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ. ಸೂಕ್ತ ಕ್ರಮಗಳನ್ನು ಕೈಗೊಂಡರೆ ಮಾತ್ರ ರೋಗ ನಿಯಂತ್ರಣ ಸಾಧ್ಯ. ಮರಗಳು ಸತ್ತರೆ ಕೂಡಲೇ ಸುಡಬೇಕು. ಸಮರ್ಪಕ ಬಸಿ ಕಾಲುವೆಗಳ ನಿರ್ವಹಣೆ, ಮಣ್ಣು ಪರೀಕ್ಷೆ ನಡೆಸಿ ಪೋಷಕಾಂಶ ನೀಡುವುದರ ಮೂಲಕ ಹತೋಟಿಗೆ ತರಬಹುದು.--ಶ್ರೀನಿವಾಸ್. ಬಿ. ವಿ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಕಾರ್ಕಳ.