

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಮೀಸಲು ರಕ್ಷಿತಾ ಅರಣ್ಯದ ಅಂಚಿನಲ್ಲಿರುವ ಪೆರಿಯಶಾಂತಿ ರಸ್ತೆಯುದ್ಧಕ್ಕೂ ಇರುವ ಅನಧಿಕೃತ ಗೂಡಂಗಡಿಗಳನ್ನು ಜುಲೈ 20ರ ಮಧ್ಯಾಹ್ನದ ಒಳಗೆ ಸಂಪೂರ್ಣವಾಗಿ ತೆರವುಗೊಳಿಸುವಂತೆ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಅವರು ಖಡಕ್ ಸೂಚನೆ ನೀಡಿದ್ದಾರೆ.
ಜೂ. 27 ರಂದು ಪ್ರಧಾನಮಂತ್ರಿ ಕಾರ್ಯಾಲಯದಿಂದ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಪೆರಿಯಶಾಂತಿ, ಪಾರ್ಪಿಕಲ್ಲು, ನಿಡ್ಲೆ, ಕುದ್ರಾಯವರೆಗಿನ ಮೀಸಲು ಅರಣ್ಯ ಪ್ರದೇಶದಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು ಕೂಡಲೇ ತೆರವುಗೊಳಿಸುವಂತೆ ರಸ್ತೆ ಬದಿ ಗೂಡಂಗಡಿ ವ್ಯಾಪಾರಸ್ಥರಿಗೆ ಮೌಖಿಕ ಆದೇಶ ನೀಡಿದ್ದರು. ಈ ಸಂಬಂಧ ಗೂಡಂಗಡಿ ನಡೆಸುತ್ತಿದ್ದ ಹಲವರು ಕಾಲಾವಕಾಶ ಕೋರಿದ್ದು ಜುಲೈ 15ರ ಒಳಗೆ ತಾವುಗಳೇ ತೆರವುಗೊಳಿಸಿಕೊಡುವುದಾಗಿ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ 15 ದಿನ ಕಳೆದರೂ ಕೂಡ ಸಂಪೂರ್ಣವಾಗಿ ಗೂಡಂಗಡಿಗಳು ತೆರವುಗೊಂಡಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
*ಆನೆ ಡ್ರೈವ್ಗೆ ತೊಡಕಾಗುತ್ತಿರುವ ಗೂಡಂಗಡಿಗಳು
ಈಗಾಗಲೇ ಈ ಪ್ರದೇಶದಲ್ಲಿ ಕಾಡಾನೆಗಳು ದಾಳಿ ನಡೆಸುತ್ತಿದ್ದು ರಸ್ತೆ ಬದಿ ವ್ಯಾಪಾರಕ್ಕೆ ಇಟ್ಟಿರುವ ಅನನಾಸು ಮತ್ತು ಹಲಸಿನ ಹಣ್ಣು ಸಹಿತ ಇತರೆ ಹಣ್ಣುಗಳನ್ನು ತಿನ್ನಲು ಆನೆಗಳು, ಗೂಡಂಗಡಿ ಬಳಿ ಬರುತ್ತಿದೆ. ಇದರಿಂದ ಆನೆ ಹೆಮ್ಮೆಟ್ಟಿಸುವ ಕಾರ್ಯಕ್ಕೆ ತೊಡಕಾಗುತ್ತಿದೆ. ರಾತ್ರಿ ಹೊತ್ತು ದಟ್ಟಾರಣ್ಯಕ್ಕೆ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯ ನಡೆಯುತ್ತಿದ್ದು, ಇಲ್ಲಿ ಎಸೆದು ಹೋಗಿರುವ ಹಣ್ಣುಗಳ ಕಾರಣಕ್ಕೆ ಆನೆಗಳು ಮತ್ತೆ ಪೆರಿಯಶಾಂತಿ ಕಡೆ ನುಗ್ಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು. ಅನಧಿಕೃತವಾಗಿ ಗೂಡಂಗಡಿ ನಡೆಸಿ ಆನೆ ಅಥವಾ ಇತರ ಪ್ರಾಣಿಗಳಿಂದ ಅವಘಡ ಸಂಭವಿಸಿದರೆ ಅದಕ್ಕೆ ಅರಣ್ಯ ಇಲಾಖೆ ಹೊಣೆಯಾಗುವುದಿಲ್ಲ, ಅಲ್ಲದೆ ಅನಧಿಕೃತ ಅಂಗಡಿ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಮಧ್ಯಾಹ್ನದ ಒಳಗೆ ಸಂಬಂಧಪಟ್ಟವರು ಗೂಡಂಗಡಿ ತೆರವುಗೊಳಿಸದಿದ್ದಲ್ಲಿ ಪೊಲೀಸ್ ಸುಪರ್ದಿಯೊಂದಿಗೆ ಅರಣ್ಯ ಇಲಾಖೆಯ ಕಾರ್ಯಾಚರಣೆಯನ್ನು ನಡೆಸುವುದಾಗಿ ಅವರು ತಿಳಿಸಿದರು.