

ಉಪ್ಪಿನಂಗಡಿ: ಚರಂಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೆ ದುರ್ನಾತದ ಸಂಕಷ್ಟಕ್ಕೆ ತುತ್ತಾಗಿರುವ ಉಪ್ಪಿನಂಗಡಿಯ ಸರ್ಕಾರಿ ಮಾದರಿ ಶಾಲೆಗೆ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಗುರುವಾರ ಭೇಟಿ ನೀಡಿ ಸಮಸ್ಯೆ ನಿವಾರಿಸಲು ಸಂಬಂಧಿಸಿದ ಅಧಿಕಾರಿಗೆ ಹದಿನೈದು ದಿನಗಳ ಕಾಲಾವಕಾಶ ನೀಡಿದರು.
ಹೆದ್ದಾರಿ ಅಗಲೀಕರಣದ ವೇಳೆ ಚರಂಡಿ ನಿರ್ಮಾಣದ ಲೋಪದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಶಾಲಾಡಳಿತ ದೂರಿತ್ತ ಹಿನ್ನೆಲೆಯಲ್ಲಿ ಸಹಾಯಕ ಕಮಿಷನರ್ ಡಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲಹೊತ್ತು ಶಾಲಾ ಮಕ್ಕಳೊಂದಿಗೆ ಸಂಭಾಷಣೆ ನಡೆಸಿದರು.
ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ಮಜೀದ್, ಸದಸ್ಯರಾದ ಫಾರೂಕ್ ಜಿಂದಗಿ, ಕಲಂದರ್ ಶಾಪಿ, ಹಿರಿಯ ವಿದ್ಯಾರ್ಥಿ ಸಂದ ಅಬ್ದುಲ್ ರಹಿಮಾನ್, ಪ್ರಮುಖರಾದ ಡಾ.ರಾಜಾರಾಮ ಕೆ.ಬಿ., ಪ್ರಶಾಂತ್ ಡಿಕೋಸ್ಟಾ, ನಾಗೇಶ್ ಪ್ರಭು, ಯು.ಟಿ. ಮಹಮ್ಮದ್ ತೌಷಿಫ್ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.