

ಶಾರ್ಜಾ: ಕೋಲ್ಕತ ನೈಟ್ರೈಡರ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ 33 ಎಸೆತಗಳಲ್ಲಿ 73 ರನ್ ಸಿಡಿಸಿದ ಎಬಿ ಡಿವಿಲಿಯರ್ಸ್ ಅವರದು ಅತಿಮಾನುಷ ಸಾಧನೆ. ಯಾಕೆಂದರೆ ಶಾರ್ಜಾದ ತೇವರಹಿತ ಪಿಚ್ನಲ್ಲಿ ಇತರೆಲ್ಲ ಬ್ಯಾಟ್ಸ್ಮನ್ಗಳು ಪರದಾಡುತ್ತಿದ್ದರು ಎಂದು ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಸಹ-ಆಟಗಾರನನ್ನು ಕೊಂಡಾಡಿದ್ದಾರೆ.
ಕೊನೇ 5 ಓವರ್ಗಳಲ್ಲಿ 65 ರನ್ ಕಸಿದ ಎಬಿಡಿ ಸಾಧನೆಯಿಂದ ಆರ್ಸಿಬಿ 2 ವಿಕೆಟ್ಗೆ 194 ರನ್ ಪೇರಿಸಿದರೆ, ಪ್ರತಿಯಾಗಿ ಕೆಕೆಆರ್ ತಂಡ 9 ವಿಕೆಟ್ಗೆ 112 ರನ್ ಗಳಿಸಲಷ್ಟೇ ಶಕ್ತವಾಯಿತು. ವಾಷಿಂಗ್ಟನ್ ಸುಂದರ್ (20ಕ್ಕೆ 2) ಮತ್ತು ಕ್ರಿಸ್ ಮಾರಿಸ್ (17ಕ್ಕೆ 2) ಜತೆಗೆ ಆರ್ಸಿಬಿ ಬೌಲರ್ಗಳು ಸಂಘಟಿತ ನಿರ್ವಹಣೆ ತೋರಿದರೆ, ಕೆಕೆಆರ್ ಪರ ಶುಭಮಾನ್ ಗಿಲ್ (34) ಮಾತ್ರ ಪ್ರತಿರೋಧ ತೋರಿದರು. ಆರಂಭಿಕ ಟಾಮ್ ಬ್ಯಾಂಟನ್ (8), ನಿತೀಶ್ ರಾಣಾ (9), ಇವೊಯಿನ್ ಮಾರ್ಗನ್ (8), ನಾಯಕ ದಿನೇಶ್ ಕಾರ್ತಿಕ್ (1), ಆಂಡ್ರೆ ರಸೆಲ್ (16) ಮತ್ತು ರಾಹುಲ್ ತ್ರಿಪಾಠಿ (16) ವೈಫಲ್ಯದಿಂದ ಕೆಕೆಆರ್ ತತ್ತರಿಸಿತು.
‘ಪಿಚ್ನಲ್ಲಿ ತೇವಾಂಶವಿರಲಿಲ್ಲ. ಹೀಗಾಗಿ ಎಲ್ಲ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡುತ್ತಿದ್ದರು. ಆದರೆ ಓರ್ವ ಸೂಪರ್ಹ್ಯೂಮನ್ ಮಾತ್ರ ಸರಾಗವಾಗಿ ರನ್ ಗಳಿಸಿದ. ಇದರಿಂದಾಗಿ 165ರ ನಿರೀಕ್ಷೆಯಲ್ಲಿದ್ದ ನಾವು 194 ರನ್ ಕೂಡಿಹಾಕಲು ಸಾಧ್ಯವಾಯಿತು. ಎಬಿಡಿ ಅವರದು ನಂಬಲಸಾಧ್ಯ ಆಟವಾಗಿತ್ತು’ ಎಂದು ಕೊಹ್ಲಿ 82 ರನ್ ಗೆಲುವಿನ ಬಳಿಕ ನುಡಿದರು.
‘ನಾನು ಕೆಲ ಎಸೆತಗಳನ್ನು ಎದುರಿಸಿದ ಬಳಿಕ ದೊಡ್ಡ ಹೊಡೆತಕ್ಕೆ ಮುಂದಾಗುವ ಯೋಜನೆಯಲ್ಲಿದ್ದೆ. ಆದರೆ ಎಬಿಡಿ ಮೈದಾನಕ್ಕಿಳಿದು 3ನೇ ಎಸೆತದಿಂದಲೇ ದೊಡ್ಡ ಹೊಡೆತ ಬಾರಿಸಲಾರಂಭಿಸಿದರು. ನಾವಿಬ್ಬರು ಶತಕದ ಜತೆಯಾಟವಾಡಿದು ಖುಷಿ ನೀಡಿತು. ಅವರ ಆಟವನ್ನು ನಾನು ಮೈದಾನದ ಅತ್ಯುತ್ತಮ ಸೀಟ್ನಿಂದ ನೋಡಿದೆ’ ಎಂದು ಕೊಹ್ಲಿ ಹೇಳಿದರು.
ತಾನೇಕೆ ಅತ್ಯುತ್ತಮ ಆಟಗಾರ ಎಂಬುದನ್ನು ಎಬಿಡಿ ತೋರಿಸಿದರು. ಕೊನೇ 5 ಓವರ್ಗಳಲ್ಲಿ 80ಕ್ಕಿಂತ ಹೆಚ್ಚು ರನ್ ಕಸಿಯುವುದು ಸುಲಭವಲ್ಲ. ಆದರೆ ಎಬಿಡಿ ಅದನ್ನು ಸುಲಭವಾಗಿರುವಂತೆ ತೋರಿಸಿದರು. ಅವರ ಆಟ ಅಮೋಘವಾಗಿತ್ತು ಎಂದು ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಹೇಳಿದರು.
ಎಬಿ ಡಿವಿಲಿಯರ್ಸ್ ಐಪಿಎಲ್ನಲ್ಲಿ ಅತ್ಯಧಿಕ 22ನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು, ವಿರಾಟ್ ಕೊಹ್ಲಿ (21) ಅವರನ್ನು ಹಿಂದಿಕ್ಕಿದರು. ಇದು ರನ್ ಅಂತರದಲ್ಲಿ ಆರ್ಸಿಬಿ ತಂಡದ ಜಂಟಿ 5ನೇ ಅತಿದೊಡ್ಡ ಗೆಲುವಾಗಿದೆ. ಆಂಡ್ರೆ ರಸೆಲ್ ಟಿ20 ಕ್ರಿಕೆಟ್ನಲ್ಲಿ 300 ವಿಕೆಟ್ ಕಬಳಿಸಿದ 10ನೇ ಬೌಲರ್ ಎನಿಸಿದರು.