

ಅಮರಾವತಿ: ಆಂಧ್ರ ಪ್ರದೇಶದಲ್ಲಿ ಏರ್ಪಟ್ಟಿರುವ ಪ್ರವಾಹದಿಂದ ಜನ ತತ್ತರಿಸಿಹೋಗಿದ್ದಾರೆ. ಟಾಲಿವುಡ್ ಸೆಲಬ್ರಿಟಿಗಳು ಸಂತ್ರಸ್ತರ ನೆರವಿಗೆ ದಾವಿಸಿದ್ದಾರೆ. ಇದೀಗ ಸರ್ಕಾರದ ಭಾಗವೇ ಆಗಿರುವ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಭಾರಿ ದೇಣಿಗೆಯನ್ನು ಘೋಷಿಸಿದ್ದಾರೆ.
ತಮ್ಮ ಸ್ವಂತ ನಿಧಿಯಿಂದ ಪ್ರವಾಹ ಸಂತ್ರಸ್ತರಿಗಾಗಿ ಆಂಧ್ರದ 400 ಪಂಚಾಯತಿಗಳಿಗೆ ತಲಾ 1 ಲಕ್ಷ ರೂ.ಗಳಂತೆ 4 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಈ ಹಣವನ್ನು ನೇರವಾಗಿ ಆಯಾ ಪಂಚಾತಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಪವನ್ ತಿಳಿಸಿದ್ದಾರೆ.
ಇನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1ಕೋಟಿ ರೂ.ನೆರವನ್ನು ಉಪ ಮುಖ್ಯಮಂತ್ರಿ ಪವನ್ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಶನಿವಾರ ವಿಜಯವಾಡದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಸ್ತಾಂತರಿಸಿದರು.
ಪವನ್ ವೈರಲ್ ಫೀವರ್ ನಿಂದ ಬಳಲುತ್ತಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪವನ್ ಅವರ ಆರೋಗ್ಯ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಅಲ್ಲಿ ಪ್ರತಿಷ್ಟಾಪಿಸಿದ್ದ ಗಣೇಶನಿಗೆ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪೂಜೆ ಸಲ್ಲಿಸಿದರು.