

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯ ಕನ್ನರ್ಪಾಡಿ-ಕಿನ್ನಮುಲ್ಕಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 20ನೇ ವರ್ಷದ ಗಣೇಶೋತ್ಸವದ ನಿಮಿತ್ತ 14 ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಿನ್ನಿಮುಲ್ಕಿ ಸ್ವಾಗತ ಗೋಪುರ ಸಮೀಪ ಗಣಪತಿ ಮೈದಾನದಲ್ಲಿ ಆ.25ರಂದು ಸಂಜೆ 5 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಗಣೇಶೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಆಗಸ್ಟ್ 23ರಮದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ.25ರಂದು ಮಧ್ಯಾಹ್ನ 3 ಗಂಟೆಗೆ ಜೋಡುಕಟ್ಟೆಯಿಂದ ಹೊರಗಾಣಿಕೆಯ ಬೃಹತ್ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಡಿ.ಕೆ. ಶಿವಕುಮಾರ ಉದ್ಘಾಟಿಸಲಿದ್ದಾರೆ. ನಾಡೋಜ ಜಿ.ಶಂಕರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜನಾಕರ್ಷಣೆಗಾಗಿ 55 ದೇಶಗಳ ಹಳೆಯ ನಾಣ್ಯ-ನೋಟುಗಳು, ಹಳೆಯ ವಾಹನ ಹಾಗೂ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದ್ದು, ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ವಿಪ ಸದಸ್ಯ ಐವನ್ ಡಿಸೋಜಾ ಉಗ್ರಾಣ ಮುಹೂರ್ತ ನೆರವೇರಿಸಲಿದ್ದಾರೆ. ವಿಪ ಸದಸ್ಯ ಮಂಜುನಾಥ ಭಂಡಾರಿ ಧ್ವಜಾರೋಹಣ, ಮಾಜಿ ಸಚಿವ ವಿನಯಕುಮಾರ ಸೊರಕೆ ವಿದ್ಯುತ್ ದೀಪಗಳ ಅನಾವರಣ, ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಪ್ರಸಾದ ನೇತ್ರಾಲಯದ ಡಾ.ಕೃಷ್ಣಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಆ.26ರಿಂದ ಪ್ರತಿದಿನ ಸಂಜೆ 5 ಗಂಟೆಗೆ ಧಾರ್ಮಿಕ ಪ್ರವಚನ ಇರಲಿದ್ದು, ಆರಂಭದ 4 ದಿನ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಪ್ರವಚನ ನೀಡಲಿದ್ದಾರೆ. ಪ್ರತಿದಿನವೂ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಆ.28, ಆ.31, ಸೆ.2 ಹಾಗೂ ಸೆ. 5ರಂದು ಮಧ್ಯಾಹ್ನ 12:30ರಿಂದ ಮಹಾ ಅನ್ನಸಂತರ್ಪಣೆ ಇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಯಕರ ಶೇರಿಗಾರ್, ರವೀಂದ್ರ ಶೆಟ್ಟಿಗಾರ, ನವೀನ ಶೆಟ್ಟಿ ಹಾಗೂ ಪ್ರಶಾಂತ ಆಚಾರ್ಯ ಇದ್ದರು.
ಆ.27ರಂದು ಗಣೇಶನ ಪ್ರತಿಷ್ಠಾಪನೆ ನಡೆಯಲಿದೆ. ಸೆ.7ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ. ಸಮಾರಂಭದ ಬಳಿಕ ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ಕೆ.ಕೃಷ್ಣಮೂರ್ತಿ ಆಚಾರ್ಯ ತಿಳಿಸಿದರು.