

ಮಂಡ್ಯ: ಒಡಿಶಾದ ಭುವನೇಶ್ವರದಲ್ಲಿ ಆ.10ರಂದು ನಡೆದ ವಿಶ್ವ ಅಥ್ಲೆಟಿಕ್ಸ್‌ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದ ಕೆ.ಆರ್.ಪೇಟೆ ತಾಲೂಕು ಗೌಡೇನಹಳ್ಳಿ ಗ್ರಾಮದ ಅಂತಾರಾಷ್ಟ್ರೀಯ ಕ್ರೀಡಾಪಟು ಜಿ.ಕೆ.ವಿಜಯಕುಮಾರಿ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿನಂದಿಸಿದರು.
ಮಹಿಳೆಯ ಸಾಧನೆಯನ್ನು ಮೆಚ್ಚಿದ ಡಿಸಿಎಂ ಡಿಕೆಶಿ ಅವರು ವಿಧಾನಸೌಧದಲ್ಲಿ ಅಭಿನಂದಿಸಿದರು. ಅಂತೆಯೇ ಪಾಲಿಕೆ ವತಿಯಿಂದ 10 ಲಕ್ಷ ರೂ ನೀಡುವುದಾಗಿ ಘೋಷಿಸಿ, 5 ಲಕ್ಷ ರೂ ಚೆಕ್ ಅನ್ನು ಹಸ್ತಾಂತರಿಸಿದರು. ಮುಂದಿನ ವರ್ಷ ಐದು ಲಕ್ಷ ರೂ ಚೆಕ್ ನೀಡುವುದಾಗಿ ತಿಳಿಸಿದರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅಥ್ಲೆಟಿಕ್ಸ್‌ನಲ್ಲಿ ನನಗೆ ಹೆಚ್ಚಿನ ಆಸಕ್ತಿ. ಹೀಗಾಗಿ ವಿಜಯಕುಮಾರಿ ಅವರ ಸಾಧನೆ ಬಗ್ಗೆ ಮಾಹಿತಿ ತಿಳಿದು ಮಂಡ್ಯದ ಸಾಧಕಿಗೆ ಅಭಿನಂದಿಸಲಾಗುತ್ತಿದೆ. ಈಕೆಯ ಸಾಧನೆಗೆ ನನ್ನ ಸಂಪೂರ್ಣ ಸಹಕಾರ ನೆರವು ಇರಲಿದೆ. ಮಂಡ್ಯದ ಹೆಣ್ಣುಮಗಳು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ. ಆಕೆಯ ತರಬೇತಿಗೆ ಬೇಕಾದ ಸಕಲ ವ್ಯವಸ್ಥೆ ಮಾಡಲಾಗುವುದು. ಹಣಕಾಸಿನ ಸಮಸ್ಯೆ ಇದೆ ಎಂದು ತಿಳಿದು ಪಾಲಿಕೆ ವತಿಯಿಂದ ಪ್ರೋತ್ಸಾಧನ ನೀಡಲಾಗುವುದು ಎಂದರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ವಿಜಯಕುಮಾರಿ, ನನ್ನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ ಡಿಸಿಎಂ ಡಿಕೆಶಿ ಹಾಗೂ ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರಿಗೆ ಧನ್ಯವಾದಗಳು. ಇದರಿಂದ ಮತ್ತಷ್ಟು ಸಾಧನೆ ಮಾಡಲು ಸ್ಪೂರ್ತಿ ಸಿಕ್ಕಂತಾಗಿದೆ. ಆರೋಗ್ಯ ಮತ್ತು ಹಣಕಾಸು ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿಂದ ಕ್ರೀಡೆಯಲ್ಲಿ ಉತ್ಸಾಹ ಕಳೆದುಕೊಂಡಿದ್ದೆ. ಆದರೀಗ ನನ್ನ ಸಾಧನೆ ಗುರುತಿಸಿ ಗೌರವಿಸಿರುವುದು ಮರೆಯಲಾಗದ ಕ್ಷಣ. ಇದರಿಂದ ನನ್ನ ಉಮ್ಮಸ್ಸು ಹಿಮ್ಮಡಿಯಾಗಿದೆ ಎಂದು ಹೇಳಿದರು.
ಇನ್ನು ಕೃಷಿ ಕುಟುಂಬದಲ್ಲಿ ಜನಿಸಿದ ವಿಜಯಕುಮಾರಿ ಅವರು ರಾಜ್ಯದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇವರ ಈ ಸಾಧನೆ ರಾಜ್ಯದ ಇತರೆ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ. 400 ಮೀಟರ್ ಸ್ಪರ್ಧೆಯಲ್ಲಿ 53.40 ಸೆಕೆಂಡ್‌ನಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದ್ದಾರೆ. ಕಡುಕಷ್ಟದಲ್ಲಿ ಬೆಳೆದು ಅಪ್ರತಿಮ ಸಾಧನೆ ಮಾಡಿದ್ದಾರೆ. ಈಕೆಯ ತಂದೆ ಕುಮಾರ ಕೃಷಿಕರಾಗಿದ್ದರೆ, ತಾಯಿ ಪ್ರೇಮಾ ಗೃಹಿಣಿ. ಪತಿ ತರುಣ್ ಶೇಖರ್ ಕ್ರೀಡಾ ತರಬೇತುದಾರರಾಗಿದ್ದಾರೆ.
ಶಾಲಾ ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟು ಆಗಿದ್ದ ವಿಜಯಕುಮಾರಿ 16ನೇ ವಯಸಿಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಆಯ್ಕೆಯಾದರು. ಬಳಿಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ನಿರಂತರ ಅಭ್ಯಾಸ ಸತತ ಪರಿಶ್ರಮದಿಂದ ಚಿನ್ನದ ಪದಕ ಪಡೆದಿರುವ ವಿಜಯಕುಮಾರಿ ಅವರು ಮುಂದೆ ಕಾಮನ್‌ವೆಲ್ತ್ ಏಷಿಯನ್ ಗೇಮ್ಸ್‌ಗೆ ಆಯ್ಕೆಯಾಗಿ ಭಾರತದ ಕೀರ್ತಿ ಪತಾಕೆ ಹಾರಿಸುವ ಇಂಗಿತ ಹೊಂದಿದ್ದಾರೆ. ಅವರಿಗೆ ಈಗಾಗಲೇ ಏಕಲವ್ಯ ಪ್ರಶಸ್ತಿ, ಜೀಜಾಬಾಯಿ ಪ್ರಶಸ್ತಿ, ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಪ್ರಶಸ್ತಿ, ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವ ಮುಡಿಗೇರಿದೆ.