

ಸೊರಬ: ಏಕಸ್ವಾಮ್ಯ, ಸ್ವಹಿತಾಸಕ್ತಿಗೆ ಒಳಗಾಗದೆ ಎಲ್ಲರ ಹಿತ ಕಾಪಾಡಲು ಮುಂದಾದಾಗ ಸಹಕಾರ ಕ್ಷೇತ್ರ ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಹಾಲು ಒಕ್ಕೂಟ, ತಾಲೂಕಿನ ಎಲ್ಲ ಸಹಕಾರ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿ ಹಾಲು ಉತ್ಪಾದಕರ ಸಂಘಗಳು ಬಲಗೊಳ್ಳದಿದ್ದರೆ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಿರಲಿಲ್ಲ. ರೈತರು ಹೈನುಗಾರಿಕೆಗೆ ಒತ್ತು ನೀಡಿದಾಗ ಕುಟುಂಬದ ಆರ್ಥಿಕ ಅಭಿವೃದ್ಧಿ ಸಾಧ್ಯ. ಅತಿವೃಷ್ಟಿ, ಅನಾವೃಷ್ಟಿ ಸಂಭರ್ದದಲ್ಲಿ ಹೈನುಗಾರಿಕೆ ರೈತರನ್ನು ಕೈಹಿಡಿದಿದೆ. ಈ ದಿಸೆಯಲ್ಲಿ ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.
ಗಾಂಧೀಜಿ ಅವರ ಸಹಕಾರ ತತ್ವಗಳು ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿವೆ. ಸಹಕಾರ ಬ್ಯಾಂಕ್‌ಗಳು ಗಟ್ಟಿಯಾಗಿ ನೆಲೆ ಕಂಡುಕೊಳ್ಳಬೇಕು. ನೆಹರು ಅವರ ಅವಧಿಯಲ್ಲಿ ಪಂಚವಾರ್ಷಿಕ ಯೋಜನೆಗಳ ಮೂಲಕ ಒತ್ತು ನೀಡಿದ ಪರಿಣಾಮ ದೇಶದಲ್ಲಿ ಹೆಚ್ಚು ಶಾಖೆಗಳು ಸ್ಥಾಪಿತವಾದವು. ಸಂಘದಲ್ಲಿ ರಾಜಕಾರಣ ಬೆರಸದೆ ಒಗ್ಗಟ್ಟಿನಿಂದ ಬಲಗೊಳಿಸಲು ಎಲ್ಲರ ಸಹಕಾರ ಅಗತ್ಯ. ಕೆ.ಪಿ.ರುದ್ರಗೌಡ ಡಿಸಿಸಿ ಬ್ಯಾಂಕ್ ನಿರ್ದೇಶಕ
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಮಾತನಾಡಿ, ಸಹಕಾರ ಉಪನಿಯಮಗಳ ಬಗ್ಗೆ ಚರ್ಚೆ ಮಾಡುವ ಅವಶ್ಯವಿದೆ. ಪ್ರಸ್ತುತ ಸಹಕಾರ ಸಂಘದ ದಿಕ್ಕು ಬದಲಾಗಿದೆ. ನಿಯಮಗಳನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಎದುರಿಸಬೇಕಾಗುತ್ತದೆ ಎಂದರು.
ಸದಸ್ಯರು ಹಾಜರಾತಿ, ವ್ಯವಹಾರಕ್ಕೆ ಮಾತ್ರ ಸಭೆ ಸೇರಿದರೆ ಉಪಯೋಗವಿಲ್ಲ. ಸಭೆಗಳಲ್ಲಿ ಗಂಭೀರ ಚರ್ಚೆ ನಡೆಸಬೇಕು. ಸಾರ್ವಜನಿಕ ಕ್ಷೇತ್ರದಲ್ಲಿ ಸಹಕಾರ ಸಂಘ ಗಟ್ಟಿಯಾಗಿದೆ ಎನ್ನುವುದನ್ನು ತೋರಿಸಬೇಕು. ಯುವಪೀಳಿಗೆಗೆ ಸಹಕಾರ ಸಂಘದ ಉದ್ದೇಶ ಪರಿಚಯಿಸುವ ದೃಷ್ಟಿಯಿಂದ ಪ್ರಬಂಧ, ಚರ್ಚಾಸ್ಪರ್ಧೆ ಏರ್ಪಡಿಸಲಾಗಿತ್ತು. ಸಹಕಾರ ಕ್ಷೇತ್ರ ಬೆಳೆಸುವ ಹೊಣೆಗಾರಿಕೆ ವಹಿಸಿಕೊಳ್ಳಬೇಕು. ವಾಟಗೋಡು ಸುರೇಶ್ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ
ಜಿಲ್ಲಾ ಉತ್ತಮ ಸಹಕಾರ ಸಂಘ ಹರೀಶಿ ಹಾಗೂ ಉತ್ತಮ ಹಾಲು ಉತ್ಪಾದಕ ಸಂಘ ಶಿಗ್ಗಾದ ಸಿಬ್ಬಂದಿ, ಸಹಕಾರ ಸಂಘ ಕುರಿತು ಏರ್ಪಡಿಸಿದ್ದ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸೊರಬ, ಆನವಟ್ಟಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತ ಸಿಬ್ಬಂದಿಗೆ ಬಹುಮಾನ ನೀಡಲಾಯಿತು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಮಂಜಪ್ಪ ನೇರಲಗಿ, ಉಪನ್ಯಾಸಕ ಎಂ.ಯು.ಏಕಾಂತ್, ಜಿಲ್ಲಾ ಹಾಪ್‌ಕಾಮ್ಸ್ ನಿರ್ದೇಶಕ ಕೆ.ವಿ.ಗೌಡ, ಶಿಮುಲ್ ನಿರ್ದೇಶಕ ದಯಾನಂದ ಗೌಡ, ಸಹಕಾರ ಸಂಘದ ಉಪನಿಬಂಧಕ ಸಿ.ನಾಗಭೂಷಣ ಕಲ್ಮನೆ, ವ್ಯವಸ್ಥಾಪಕ ನಿರ್ದೇಶಕಿ ಎಚ್.ಅನ್ನಪೂರ್ಣಾ, ಟಿ.ಬಿ.ರಾಜೇಂದ್ರ ನಾಯಕ್, ನಿಂಗಪ್ಪ ಗುಂಡಶೆಟ್ಟಿಕೊಪ್ಪ, ಅಶೋಕ ಹೆಗಡೆ, ಆರ್.ತೇಜೋಮೂರ್ತಿ, ಎಚ್.ಎಸ್.ಸಂಜೀವಕುಮಾರ್, ಸತೀಶ್‌ಕುಮಾರ್, ಎಸ್.ಜಿ.ಶೇಖರ್, ನಿಂಗಪ್ಪ, ಸುಬ್ರಹ್ಮಣ್ಯ, ಮಂಜುನಾಥ ಇತರರಿದ್ದರು.