ಡಿಸಿಸಿ ಬ್ಯಾಂಕ್​ ಗದ್ದುಗೆಗೆ ಜಿದಾಜಿದ್ದಿ

22kolar2B- dccb story
Published on

ಕೋಲಾರ: ಕೋಲಾರ&ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಆಡಳಿತ ಮಂಡಳಿಯ 18 ನಿರ್ದೇಶಕ ಸ್ಥಾನದ ಚುನಾವಣೆಯ ಕಾವು ದಿನೇದಿನೆ ರಂಗೇರುತ್ತಿದ್ದು, ಮೇ 28ಕ್ಕೆ ಮತದಾನ ನಿಗದಿಯಾಗಿದೆ.

ಒಟ್ಟು 54 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಉಮೇದುವಾರಿಕೆ ವಾಪಸ್​ ಪಡೆಯಲು ಎರಡು ದಿನ ಅವಕಾಶ ನೀಡಲಾಗಿತ್ತು, ಗುರುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಕೊಳವನಹಳ್ಳಿ ತಮ್ಮೇಗೌಡ ವಾಪಸ್​ ಪಡೆದುಕೊಂಡಿದ್ದು, ಈಗ 53 ಮಂದಿ ಕಣದಲ್ಲಿದ್ದಾರೆ. ಇನ್ನು ಎರಡನೇಯ ದಿನ ಇನ್ನು ಎಷ್ಟು ಮಂದಿ ಉಮೇದುವಾರಿಕೆ ವಾಪಸ್​ ಪಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಎರಡೂ ಜಿಲ್ಲೆಗಳ ಶಾಸಕರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಕೋಲಾರ ಜಿಲ್ಲೆಯಿಂದ ಮುಳಬಾಗಿಲು ಶಾಸಕ ಕೊತ್ತೂರು ಜಿ.ಮಂಜುನಾಥ್​. ಕೆಜಿಎ್​ ಶಾಸಕಿ ರೂಪಕಲಾ ಹಾಗೂ ಬಾಗೇಪಲ್ಲಿ ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಸ್ಪರ್ಧಿಸಿದ್ದಾರೆ. ಕಳೆದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರು, ಮಾಜಿ ನಿರ್ದೇಶಕರು ಸಹ ಕಣದಲ್ಲಿದ್ದು ಗೆಲುವಿಗೆ ನಾನಾ ರೀತಿ ಕಸರತ್ತು ನಡೆಸುತ್ತಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗಳಿಂದ 14, ಪ್ರಾಥಮಿಕ ಹಾಲು ಸಹಕಾರ ಸಂಗಳಿಂದ 2, ಟಿಎಪಿಸಿಎಂಸ್​ ಹಾಗೂ ಇತರ ಸಹಕಾರ ಸಂಗಳಿಂದ ತಲಾ ಒಬ್ಬರು ನಿರ್ದೇಶಕರು ಸೇರಿ 18 ಮಂದಿ ಚುನಾಯಿತ ನಿರ್ದೇಶಕರು ಆಡಳಿತ ಮಂಡಳಿಗೆ ಆಯ್ಕೆಯಾಗಬೇಕಾಗಿದೆ.

ಶಾಸಕರಿಬ್ಬರ ಅವಿರೋಧ ಆಯ್ಕೆ

ಕೆಜಿಎಫ್​ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ನಿರ್ದೇಶಕರ ಕ್ಷೇತ್ರಕ್ಕೆ ಕೆಜಿಎಫ್​ ಶಾಸಕಿ ಎಂ.ರೂಪಕಲಾ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ನಿರ್ದೇಶಕರ ಕ್ಷೇತ್ರಕ್ಕೆ ಬಾಗೇಪಲ್ಲಿ ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದಾರೆ. ಹೀಗಾಗಿ ಇಬ್ಬರ ಆಯ್ಕೆ ಖಚಿತವಾಗಿದ್ದು, ಮೇ 28ರಂದು ಅಧಿಕೃತವಾಗಿ ಘೋಷಿಸಲಾಗುತ್ತದೆ. ಬಾಕಿಯಿರುವ 16 ನಿರ್ದೇಶಕರ ಕ್ಷೇತ್ರಗಳಿಗೆ ಬ್ಯಾಖಿನ ಹಿಂದಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಸೇರಿ 52 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಮೇ 28ರಂದು ಮತದಾನ ನಡೆಯಲಿದೆ.

ಮತದಾರರಿಗೆ ಭರಪೂರ ಆಮಿಷ

ಮತದಾರನ್ನು ಸೆಳೆಯುವ ಪ್ರಯತ್ನ ಅಭ್ಯರ್ಥಿಗಳಿಂದ ಜೋರಾಗಿಯೇ ನಡೆಯುತ್ತಿದ್ದು, ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವವರು ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಪ್ರವಾಸ, ಬೆಲೆಬಾಳುವ ಉಡುಗೊರೆ, ನಗದು ಹೀಗೆ ಒಂದಲ್ಲ ಒಂದು ರೀತಿ ಭರಪೂರ ಆಮಿಷ ಹರಿದು ಬರುತ್ತಿದೆ.

ನಾಮಪತ್ರ ವಾಪಸ್​ಗೆ ಇಂದು ಕೊನೇ ದಿನ

ನಾಮಪತ್ರ ವಾಪಸ್​ ಪಡೆಯಲು ಮೇ 23 ಕೊನೇ ದಿನವಾಗಿದ್ದು, ಮೇ 28ರಂದು ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ನಡೆದು, ಅಂದೇ ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಡಾ.ಮೈತ್ರಿ ಎಚ್​.ಪಿ.ಎಸ್​. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net