

ಗುರುಪುರ: ಕೆತ್ತಿಕಲ್ ಗುಡ್ಡ ಕುಸಿತ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಥಳ ಪರಿಶೀಲಿಸಿ, ತಕ್ಷಣ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕಾರ್ಯಗಳ ಬಗ್ಗೆ ಅಧಿಕಾರಿಗಳು, ಹೆದ್ದಾರಿ ಗುತ್ತಿಗೆ ಸಂಸ್ಥೆಯ(ಡಿಬಿಎಲ್) ಇಂಜಿನಿಯರ್‌ಗಳು ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿದರು.
ಮಳೆ ನಿಂತ ತಕ್ಷಣ ಕೆತ್ತಿಕಲ್‌ನಲ್ಲಿ ಸಾಧ್ಯವಿರುವ ಎಲ್ಲ ತಾತ್ಕಾಲಿಕ ಪರಿಹಾರ ಕಾರ್ಯ ನಡೆಸಬೇಕು. ಮಳೆ ನೀರು ಹರಿಯಲು ಉತ್ತಮ ಚರಂಡಿ ವ್ಯವಸ್ಥೆ ಮಾಡಬೇಕು ಎಂದು ಡಿಬಿಎಲ್ ಸಂಸ್ಥೆಯ ಸಿಬ್ಬಂದಿಗೆ ಸೂಚಿಸಿದ ಡಿಸಿ, ಪ್ರಸಕ್ತ ಗುಡ್ಡ ಕುಸಿದಿರುವ ಕೆತ್ತಿಕಲ್‌ನಲ್ಲಿ ಗುಡ್ಡದ ಮೇಲಿರುವ ಖಾಸಗಿ ಜಾಗ ಸ್ವಾಧೀನಪಡಿಸಿ ಮುಂದಿನ ಕಾಮಗಾರಿ ನಡೆಸಬೇಕು. ಜಾಗದ ಮಾಲೀಕರು ಜಿಲ್ಲಾಡಳಿತದೊಂದಿಗೆ ಸಹಕರಿಸುತ್ತಿದ್ದಾರೆ ಎಂದರು.
ಕೆತ್ತಿಕಲ್ ಗುಡ್ಡದ ಮೇಲಿರುವ ನಮ್ಮ ಒಟ್ಟು 3 ಎಕರೆ ಜಾಗದಲ್ಲಿ 29 ಸೆಂಟ್ಸ್ ಜಾಗ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಸ್ವಾಧೀನವಾಗಿದೆ. ಮನೆ, ತೋಟವಿರುವ ಈ ಜಾಗ ಸ್ವಾಧೀನಪಡಿಸಲು ಅಭ್ಯಂತರವಿಲ್ಲ. ಆದರೆ ಜಾಗಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಜಾಗದ ಮಾಲಕಿ ಸ್ಟೆಲ್ಲಾ ಫರ್ನಾಂಡಿಸ್ ವಿಜಯವಾಣಿ ಪತ್ರಿಕೆಗೆ ತಿಳಿಸಿದರು.
ಎಡಿಸಿ ಸಂತೋಷ್ ಕುಮಾರ್, ಮಂಗಳೂರು ತಹಸೀಲ್ದಾರ್ ಪ್ರಶಾಂತ್ ಪಾಟೀಲ್, ಮನಪಾ ಆಯುಕ್ತ ರವಿಚಂದ್ರ ನಾಯಕ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಪ್ರಾಜೆಕ್ಟ್ ಡೈರೆಕ್ಟರ್ ಜಾವೇದ್ ಆಝ್ಮಿ, ಗಣಿ ಮತ್ತು ಕಂದಾಯ ಇಲಾಖಾಧಿಕಾರಿಗಳು ಇದ್ದರು. ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್.ಸಾಲ್ಯಾನ್, ಉದ್ಯಮಿ ರಘು ಸಾಲ್ಯಾನ್, ಡಿಬಿಎಲ್ ಸಂಸ್ಥೆಯ ಹಿರಿಯ ಅಧಿಕಾರಿ ನಾಗೇಶ್ ರಾವ್, ಮ್ಯಾನೇಜರ್ ನಾಗಬಾಬು ರೆಡ್ಡಿ ಹಾಗೂ ಸ್ಥಳೀಯರು ಕೆತ್ತಿಕಲ್ ಗುಡ್ಡ ಕುಸಿದ ಬಗ್ಗೆ ಮಾಹಿತಿ ನೀಡಿದರು.
ನೂಯಿಗೆ ಭೇಟಿ: ಜಿಲ್ಲಾಧಿಕಾರಿ ಮತ್ತು ಇತರ ಹಿರಿಯ ಅಧಿಕಾರಿ ತಂಡ ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದ ಗಂಭೀರ ಸಮಸ್ಯೆ ಎದುರಿಸುತ್ತಿರುವ ಗುರುಪುರ ಗ್ರಾಪಂ ವ್ಯಾಪ್ತಿಯ ನೂಯಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಗುರುಪುರ ಪಿಡಿಒ ಪಂಕಜಾ ಶೆಟ್ಟಿ, ವಾರ್ಡ್ ಸದಸ್ಯರಾದ ಹರೀಶ್ ಬಳ್ಳಿ ಮತ್ತು ಯಶವಂತ ಶೆಟ್ಟಿ ಮತ್ತಿತರರು ಇದ್ದರು.
ಹೆದ್ದಾರಿ ಕೆಲಸದಿಂದ ಮನೆಗಳಿಗೆ ಅಪಾಯ
ನೂಯಿಯಲ್ಲಿ ವಿಸ್ತರಣೆ ಕಾಮಗಾರಿ ನಡೆದಿರುವ ಹೆದ್ದಾರಿಯ ಬದಿಯಲ್ಲಿರುವ ಐದಾರು ಮನೆಗಳು ಅಪಾಯದಲ್ಲಿವೆ. ಈ ಭಾಗದಲ್ಲಿ ಮಳೆ ನೀರು ಹರಿಯಲು ತಾತ್ಕಾಲಿಕ ತೋಡು ನಿರ್ಮಿಸಬೇಕು. ಮಳೆ ನಿಂತ ಮೇಲೆ ಶಾಶ್ವತ ಪರಿಹಾರವಾಗಿ ಕಾಂಕ್ರೀಟ್ ತೋಡು ಮತ್ತು ತಡೆಗೋಡೆ ನಿರ್ಮಿಸಬೇಕು ಎಂದು ಡಿಸಿ ಮುಲ್ಲೈ ಮುಗಿಲನ್ ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್ ಡೈರೆಕ್ಟರ್ ಜಾವೇದ್ ಆಝ್ಮಿ ಅವರಿಗೆ ಸೂಚಿಸಿದರು. ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದ ಶರೀಫ್, ಇಂತಿಯಾಝ್, ಜಾಹಿರ್, ಸಿದ್ದಿಕ್, ಭೋಜ ಸುವರ್ಣ ಅವರ ಮನೆಗಳು ಹಾಗೂ ತುಕಾರಾಮ ಪೂಜಾರಿ ಅವರು ಲೀಸ್‌ಗೆ ಪಡೆದಿರುವ ರವಿಶಂಕರ್ ಎಂಬುವರ ತೋಟದ ಜಾಗ ಅಪಾಯದಲ್ಲಿದೆ. ಈ ಬಗ್ಗೆ ಕಳೆದ ವಾರ ವಿಜಯವಾಣಿಯಲ್ಲಿ ಸುದ್ದಿ ಪ್ರಕಟಗೊಂಡಿತ್ತು.
ಕೆತ್ತಿಕಲ್‌ನಲ್ಲಿ ಭೂಕುಸಿತ ಸಂಭವ?
ಕೆತ್ತಿಕಲ್ ಬಸ್ ತಂಗುದಾಣಕ್ಕೆ ಹತ್ತಿರದಲ್ಲಿ ಹಿಂದೆ ಎರಡು ಬಾರಿ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಮತ್ತೆ ರಸ್ತೆ ಕುಸಿತ ಲಕ್ಷಣಗಳು ಕಂಡು ಬಂದಿವೆ. ಇಲ್ಲಿ ಪ್ರಸಕ್ತ ಕಾಮಗಾರಿ ಪೂರ್ಣಗೊಂಡಿರುವ ಹೆದ್ದಾರಿ ಭಾಗದಲ್ಲಿ ರಸ್ತೆ ಕುಸಿದಿದೆ. ಈ ಭಾಗದ ಗುಡ್ಡದೊಳಗಿರುವ ಅಧಿಕ ಪ್ರಮಾಣದ ನೀರಿನ ಒರತೆಯೇ ಇದಕ್ಕೆ ಮುಖ್ಯ ಕಾರಣ. ಭೂಕುಸಿತವಾದಲ್ಲಿ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಬಿರುಕು ಉಂಟಾಗಲಿದೆ. ಆದ್ದರಿಂದ ಈಗ ಕೆತ್ತಿಕಲ್ ಹೆದ್ದಾರಿ ಭಾಗದಲ್ಲಿ ಹೆದ್ದಾರಿಗೆ ಗುಡ್ಡ ಕುಸಿತ ಹಾಗೂ ಭೂಕುಸಿತದ ಸಮಸ್ಯೆ ಎದುರಾಗಿದೆ.