ಜಿಲ್ಲಾದ್ಯಂತ ಸಂಚಾರ ಪೊಲೀಸರ ಹದ್ದಿನಕಣ್ಣು  ಮೊದಲ ದಿನವೇ 91500 ರೂ. ದಂಡ

1000197934.jpg
Published on

ದಾವಣಗೆರೆ: ನಗರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಇದೀಗ ಸಂಚಾರ ಪೊಲೀಸರು ಹದ್ದಿನಕಣ್ಣು ಇಟ್ಟಿದ್ದಾರೆ. ನಗರದ ಹೊರವಲಯವೂ ಒಳಗೊಂಡಂತೆ ಪ್ರಮುಖ ವೃತ್ತ, ರಸ್ತೆಗಳಲ್ಲಿ ಶುಕ್ರವಾರ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮೊದಲ ದಿನದಲ್ಲೇ ಸಂಚಾರ ನಿಯಮ ಉಲ್ಲಂಘನೆಯ 199 ಪ್ರಕರಣ ದಾಖಲಿಸಿರುವ ಪೊಲೀಸರು 91500 ರೂ.ಗಳ ದಂಡ ವಿಧಿಸಿದರು. ಕರ್ಕಶ ಧ್ವನಿ ಸೂಸುವ ಸೈಲೆನ್ಸರ್ ಮತ್ತು ಹಾರ್ನ್‌ಗಳ ವಿರುದ್ಧವೂ ವಿಶೇಷ ಕಾರ್ಯಾಚರಣೆ ನಡೆಸಿ ವಾಹನ ಸವಾರರಿಗೆ ಸ್ಥಳದಲ್ಲೇ ದಂಡ ವಿಧಿಸುವ ಜತೆಗೆ ಎಚ್ಚರಿಕೆ ನೀಡಲಾಯಿತು.
ಕರ್ಕಶ ದ್ವನಿ ಸೂಸುವ ಹಾರ್ನ್‌ಗಳ ಸಂಬಂಧ 25 ಪ್ರಕರಣಗಳಿಂದ 12,500 ರೂ. ದಂಡ ವಿಧಿಸಲಾಯಿತು. ಹೆಲ್ಮೆಟ್‌ರಹಿತ ವಾಹನ ಚಲಾಯಿಸಿದ 105  ಪ್ರಕರಣಗಳಿಂದ 3 ಸಾವಿರ ರೂ., ಟ್ರಿಪಲ್ ರೈಡಿಂಗ್‌ನ 20 ಪ್ರಕರಣಗಳಿಂದ 10 ಸಾವಿರ ರೂ., ರ‌್ಯಾಕ್‌ಲೆಸ್ ರೈಡಿಂಗ್ ಹಿನ್ನೆಲೆಯ 2 ಪ್ರಕರಣಗಳಿಂದ ಸಾವಿರ ರೂ, ಸೀಟ್‌ಬೆಲ್ಟ್ ಧರಿಸದ 12 ಪ್ರಕರಣಗಳಿಂದ 6 ಸಾವಿರ ರೂ, ಬೈಕ್-ಆಟೋಗಳಲ್ಲಿ ಹೆಚ್ಚುವರಿ ಪ್ರಯಾಣಿಕರು ವಾಹನ ಚಲಾಯಿಸಿದ್ದರ ಸಂಬಂಧ 35 ಪ್ರಕರಣಗಳಿಂದ 7 ಸಾವಿರ ರೂ. ದಂಡ ವಿಧಿಸಲಾಯಿತು.
ಎಸ್ಪಿ ಉಮಾ ಪ್ರಶಾಂತ್ ಹಾಗೂ ಎಎಸ್ಪಿಗಳಾದ ವಿಜಯಕುಮಾರ್ ಎಂ. ಸಂತೋಷ್, ಜಿ. ಮಂಜುನಾಥ್, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಮಾರ್ಗದರ್ಶನದಲ್ಲಿ ಸಂಚಾರ ಪೊಲೀಸ್ ವೃತ್ತ ನಿರೀಕ್ಷಕರಾದ ಮಂಜುನಾಥ ನಲವಾಗಲು ನೇತೃತ್ವದಲ್ಲಿ ದಕ್ಷಿಣ ಹಾಗೂ ಉತ್ತರ ಸಂಚಾರ ಠಾಣೆಗಳ ಅಧಿಕಾರಿ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.
ಜಿಲ್ಲಾದ್ಯಂತ ಈ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದ್ದು, ವಾಹನ ಸವಾರರು ಕಡ್ಡಾಯವಾಗಿ ಚಾಲನಾ ಪರವಾನಿಗೆ, ವಾಹನದ ವಿಮೆ ಹೊಂದಿರಬೇಕು, ವಾಹನಗಳಲ್ಲಿ ಕರ್ಕಶ ಧ್ವ್ವನಿ ಸೂಸುವ ಸೈಲೆನ್ಸರ್, ಕರ್ಕಶ ಧ್ವ್ವನಿ ಸೂಸುವ ಹಾರ್ನ್‌ಗಳನ್ನು ಹಾಕಬಾರದು ಹಾಗೂ ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸಬೇಕು. ಟ್ರಿಪಲ್ ರೈಡಿಂಗ್, ಏಕಮುಖ ಸಂಚಾರ ಮಾಡಬಾರದು, ಕಾರು ಚಾಲಕರು ಸೀಟ್‌ಬೆಲ್ಟ್ ಧರಿಸಿರಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಇತ್ತೀಚೆಗೆ ಹೆಚ್ಚು ಬೆಳಕು ಹೊರಹಾಕುವ ಎಲ್ಇಡಿ ದೀಪಗಳನ್ನು ವಾಹನಗಳಿಗೆ ಅಳವಡಿಸುತ್ತಿದ್ದು, ಇದರಿಂದ ಅಭಿಮುಖವಾಗಿ ಸಂಚರಿಸುವ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಕೇಂದ್ರ ಮೋಟಾರು ಕಾಯ್ದೆಯ ಮಾನದಂಡದಂತೆ ವಾಹನ ಸವಾರರು ಹೆಡ್‌ಲೈಟ್ ಅಳವಡಿಕೆ ಮಾಡಿಕೊಳ್ಳಬೇಕು. ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಲಾಗುವುದು. ಸಂಚಾರ ನಿಯಮ ಪಾಲಿಸದಿದ್ದಲ್ಲಿ ಕ್ರಮಜರುಗಿಸಲಾಗುವದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net