More

  ಸಂತೆಯೊಳಗೊಂದು ಶಾಲೆಯ ಮಾಡಿ..!      ಎರಡೇ ವರ್ಷಕ್ಕೆ ಏರಿದ ಮಕ್ಕಳ ದಾಖಲಾತಿ    ಗಡಿಯಾರ ಕಂಬ ವೃತ್ತದ ಸರ್ಕಾರಿ ಸ್ಕೂಲ್ ಕಮಾಲ್


  ಡಿ.ಎಂ.ಮಹೇಶ್, ದಾವಣಗೆರೆ
  ಸಂತೆಯೊಳಗೊಂದು ಶಾಲೆಯ ಮಾಡಿ, ಗದ್ದಲಕೆ ‘ಅಂಜದಿರೆ’ ಎಂತಯ್ಯ..!
  ಹೌದು..! ದಾವಣಗೆರೆಯ ಗಡಿಯಾರ ಕಂಬ ವೃತ್ತದ ಸ್ವಾತಂತ್ರೃಪೂರ್ವದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒನ್‌ಲೈನ್ ಸ್ಟೋರಿ ಇದು. ಹೇಳಿಕೇಳಿ ಇದು  ಜನವಸತಿಗಳಿಲ್ಲದ ಅಪ್ಪಟ ವಾಣಿಜ್ಯ ಪ್ರದೇಶ. ನಿತ್ಯವೂ ತರಕಾರಿ-ಹಣ್ಣಿನ ಸಂತೆ ಮಾಡುವವರ ಕೂಗು ಒಂದೆಡೆ. ಗಂಟೆಗೊಮ್ಮೆ ಸಪ್ಪಳ ಮಾಡುವ ಗಡಿಯಾರ. ಇದರ ಗೊಡವೆಯೇ ಇಲ್ಲದಂತೆ ಈ ವಿದ್ಯಾಲಯ ಆರೋಗ್ಯಕರ ಸದ್ದು ಮಾಡಿದೆ!
  1930ರಲ್ಲಿ ನಿರ್ಮಾಣಗೊಂಡ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಗಳು ನಡೆಯುತ್ತಿವೆ. ಎರಡು ವರ್ಷದಿಂದೀಚೆಗೆ ಶಿಶುವಿಹಾರ ತರಗತಿಗಳು ಆರಂಭವಾಗಿವೆ. ಮೂರು ವರ್ಷದ ಹಿಂದೆ ದಾಖಲಾಗಿದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 24. ಹಿಂದಿನ ವರ್ಷ ಇದು 79ಕ್ಕೆ ಏರಿತು. ಈ ಬಾರಿ ಎಲ್‌ಕೆಜಿ, ಯುಕೆಜಿ ಮಕ್ಕಳೂ ಒಳಗೊಂಡು 130 ಸ್ಟೂಡೆಂಟ್ ದಾಖಲಾತಿ ಆಗಿದೆ!
  ಖಾಸಗಿ ಶಾಲೆಗಳತ್ತ ಮುಗಿ ಬೀಳುವ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳು ಸೊರಗುತ್ತಿವೆ ಎಂಬುದು ನಿಸ್ಸಂದೇಹ. ಆದರೆ ಅಂತಹ ಶಾಲೆಗಳ ಪಟ್ಟಿಗೆ ಸೇರದ ಸ್ಕೂಲ್ ಕಮಾಲ್ ಮಾಡಿದೆ. ರಜಾ ದಿನಗಳಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ತಮ್ಮ ಶಾಲೆಗಳನ್ನು ಪ್ರಮೋಟ್ ಮಾಡುವುದು ಸಹಜ.
  ಈ ಸರ್ಕಾರಿ ಶಾಲೆಯ ಶಿಕ್ಷಕರೂ ತಾವೂ ಕಡಿಮೆ ಇಲ್ಲ ಎಂಬಂತೆ ಸುತ್ತಮುತ್ತಲ ಪ್ರದೇಶಗಳ ಮನೆ ಮನೆಗಳಿಗೆ ತಿರುಗಿ, ಕರಪತ್ರ ಹಂಚಿದ್ದಾರೆ. ವಿದ್ಯಾರ್ಥಿಗಳನ್ನು ನಮ್ಮ ಶಾಲೆಗೆ ಸೇರಿಸಿ ಎಂದು ಮನವಿ ಮಾಡಿದ್ದಾರೆ. ದೂರದ ಬಡಾವಣೆ ಮಕ್ಕಳಿಗಾಗಿ ಉಚಿತ ಪ್ರಯಾಣಕ್ಕೆ ಒಂದು ಆಟೊ ವ್ಯವಸ್ಥೆ ಮಾಡಲಾಗಿತ್ತು.
  ಇದರ ಜತೆಗೆ ಈ ಶಾಲೆಯ ಮಕ್ಕಳಿಗೆ ಪ್ರತಿ ವರ್ಷವೂ ನೋಟ್‌ಪುಸ್ತಕ, ಕಾಂಪಾಸ್ ಪೆಟ್ಟಿಗೆ, ಪೆನ್ನು, ಪೆನ್ಸಿಲ್ ಇತ್ಯಾದಿ ಸೌಕರ್ಯಗಳೂ ಕೂಡ ದಾನಿಗಳಿಂದ ಹರಿದುಬರುತ್ತಿದೆ. ಹೀಗಾಗಿ ಅವ ಪಾಲಕರಿಗೆ ದೊಡ್ಡ ಹೊರೆ ತಗ್ಗಿದೆ. ಹೀಗಾಗಿ ಹಿಂದಿನ ವರ್ಷಗಳಲ್ಲಿ ಮಕ್ಕಳನ್ನು ಸೇರಿಸಿದ ಪಾಲಕರು ನೆರೆಹೊರೆಯವರಲ್ಲಿ ಮೆಚ್ಚುಗೆ ಮಾತುಗಳು ಕೂಡ ದಾಖಲಾತಿ ಹೆಚ್ಚಳದ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಸಿಆರ್‌ಪಿ ವೀಣಾ.
  ಮಕ್ಕಳ ಸಂಖ್ಯೆ ಕುಸಿದಿದ್ದರಿಂದಾಗಿ ಕಾಯಿಪೇಟೆ ಸಮೀಪದ ಸರ್ಕಾರಿ ಶಾಲೆ ಕೆಲವು ವರ್ಷದ ಹಿಂದೆ ಈ ವಿದ್ಯಾಲಯದಲ್ಲಿ ವಿಲೀನವಾಗಿತ್ತು. ಮೂರು ವರ್ಷದ ಹಿಂದೆ ಇಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಕುಸಿದಾಗ ಇದೇ ಆತಂಕ ಎದುರಾಗಿತ್ತು. ಶಾಲೆ ಉಳಿಸಿಕೊಳ್ಳಲು ಶಿಕ್ಷಕರು ಮಾಡಿದ ಶ್ರಮ ಡಯಟ್ ಕೇಂದ್ರದಲ್ಲೂ ಮೆಚ್ಚುಗೆ ಗಳಿಸಿತ್ತು.
  ಇಲ್ಲಿಗೆ ಬಾಷಾ ನಗರ, ಮಂಡಕ್ಕಿ ಭಟ್ಟಿ ಪ್ರದೇಶ, ಆಜಾದ್‌ನಗರ, ಬಂಬೂಬಜಾರ್, ದೇವರಾಜು ಅರಸು ಬಡಾವಣೆಯ ಮಕ್ಕಳೂ ಬರುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ತಕ್ಕಂತೆ ಉಚಿತ ಆಟೋಗಳ ಸಂಖ್ಯೆ ಎರಡಕ್ಕೆ ಜಿಗಿದಿದೆ. ಶಾಲೆಗೆ ಹೊಂದಿಕೊಂಡ ವಾಣಿಜ್ಯ ಮಳಿಗೆಗಳಲ್ಲಿ ಚರ್ಮ ಕುಟೀರ ನಡೆಸುವವರು ನೀಡುವ ಬಾಡಿಗೆ ಹಣ ಹಾಗೂ ಸಮೀಪದಲ್ಲಿ ಹಾಕಲಾಗುವ ಖಾಸಗಿ ಫ್ಲೆಕ್ಸ್‌ನಿಂದ ಬರುವ ಆದಾಯದಿಂದ ಶಾಲೆಯ ವೆಚ್ಚ ಸರಿದೂಗಿಸಲಾಗುತ್ತಿದೆ. ದಾಖಲಾತಿ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕಿ, ಸಹ ಶಿಕ್ಷಕಿ ಹುದ್ದೆಗೂ ಬೇಡಿಕೆ ಬಂದಿದೆ.
  ಖಾಸಗಿ ಶಾಲೆ ಮೀರಿಸುವಂತೆ ನಮ್ಮಲ್ಲೂ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತವೆ. ವಸ್ತು ಪ್ರದರ್ಶನಗಳೂ ಗಮನ ಸೆಳೆಯುತ್ತಿವೆ. ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆ ಇದೆ. 6 ಕಂಪ್ಯೂಟರ್‌ಗಳಿವೆ. ಸರ್ಕಾರದ ಸೌಲಭ್ಯಗಳೂ ಇವೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿಯೂ ಶಾಲೆ ಹಿಂದೆ ಬಿದ್ದಿಲ್ಲ ಎನ್ನುತ್ತಾರೆ ಸಹಶಿಕ್ಷಕಿ ಎಂ.ಬಿ.ತೇಜಸ್ವಿನಿ.
  ಮೈದಾನ ಕಿರಿದಾದ್ದರಿಂದ ಕ್ರೀಡಾ ಚಟುವಟಿಕೆಗಳಿಗೆ ವರ್ಷಕ್ಕೊಮ್ಮೆ ಬಾಲಕರ ಸರ್ಕಾರಿ ಶಾಲಾ ಮೈದಾನ ಅವಲಂಬನೆ ಹೆಚ್ಚಿದೆ. ಶಾಲಾವಣದಲ್ಲಿ ಸಿಮೆಂಟ್ ಸ್ಲಾೃಬ್ ಹಾಕಿಸುವ ಅನಿವಾರ್ಯತೆ ಇದೆ. ಮುಂದಿನ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದಲ್ಲಿ, ಇದೇ ಶಾಲೆಯ ಪರಿಸರದಲ್ಲಿ ಕಾರ್ಯನಿರತ ಉತ್ತರವಲಯ ಬಿಇಒ ಕಚೇರಿಗೂ ಕಟ್ಟಡದ ಚಿಂತೆ ಕಾಡುತ್ತಿದೆ!!

  ಎರಡು ವರ್ಷದಿಂದ ಗಡಿಯಾರ ಕಂಬ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಇನ್ನೂ ಸಹ ನೋಂದಣಿ ನಡೆಯುತ್ತಿದೆ. ಮನೆ ಮನೆ ಸರ್ವೇ ನಡೆಸಿ ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಶಿಕ್ಷಕರ ಬದ್ಧತೆ ಗಮನಾರ್ಹ. ಆಟೋರಿಕ್ಷಾ ವ್ಯವಸ್ಥೆ ಕೂಡ ಮಕ್ಕಳಿಗೆ ಅನುಕೂಲವಾಗಿದೆ.
  ಶೇರ್ ಅಲಿ
  ದಾವಣಗೆರೆ ಉತ್ತರವಲಯ ಬಿಇಒ.

  ಸಹ ಶಿಕ್ಷಕರ ಶ್ರಮ ಹಾಗೂ ದಾನಿಗಳ ನೆರವಿನಿಂದಾಗಿ ನಮ್ಮ ಶಾಲೆ ಬೆಳವಣಿಗೆ ಆಗುತ್ತಿದೆ. ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಕ್ಕಳ ಸಂಚಾರಕ್ಕೆ ಈ ಬಾರಿ ಮತ್ತೊಂದು ಆಟೊ ವ್ಯವಸ್ಥೆ ಮಾಡಲಾಗುತ್ತಿದೆ. ದಾನಿಯೊಬ್ಬರು ವಾಟರ್ ಫಿಲ್ಟರ್, ಡೆಸ್ಕ್‌ಗಳನ್ನು ಈ ಬಾರಿ ನೀಡುತ್ತಿದ್ದಾರೆ.
  ಷರೀಫಾಬಿ
  ಪ್ರಭಾರಿ ಮುಖ್ಯ ಶಿಕ್ಷಕಿ, ಗಡಿಯಾರ ಕಂಬ ಸರ್ಕಾರಿ ಶಾಲೆ.

  See also  ಕಾನ್‌ಸ್ಟೇಬಲ್‌ಗೆ ಕರೊನಾ ಸೋಂಕು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts