

ದಾವಣಗೆರೆ: ಚನ್ನಗಿರಿ ಪೊಲೀಸರ ವಿಚಾರಣೆ ಹಂತದಲ್ಲೇ, ಮಟಕಾ ಜೂಜಾಟದ ಆರೋಪಿ ಆದಿಲ್ ಸಾವಿಗೀಡಾದ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆಯಾಗಿದೆ.
ಸಿಐಡಿ ವಿಭಾಗದ ಡಿವೈಎಸ್ಪಿ ಕನ್ನಿಕಾ ಲಕ್ಷ್ಮಿ ಸೇರಿ ನಾಲ್ವರ ಅಧಿಕಾರಿಗಳ ತಂಡ ಚನ್ನಗಿರಿಗೆ ಆಗಮಿಸಿದ್ದು ತನಿಖಾ ಪ್ರಕ್ರಿಯೆ ಆರಂಭಿಸಿದೆ. ಪೊಲೀಸರು ಇದುವರೆಗೆ ನಡೆಸಿದ ತನಿಖೆಯ ವಿವರಗಳನ್ನು ಕಲೆ ಹಾಕುತ್ತಿದೆ. ಈ ನಡುವೆ ಸ್ಥಳೀಯ ಪೊಲೀಸರು 40ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ್ದಾರೆ.
ಸಿಐಡಿ ಅಧಿಕಾರಿಗಳು ಮುಂದಿನ ತನಿಖೆ ನಡೆಸಲಿದ್ದು, ಅವರೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ರ ವ್ಯವಹಾರ ಮಾಡಲಾಗುತ್ತಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಸ್ಪಷ್ಟಪಡಿಸಿದ್ದಾರೆ.
ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ಕುರಿತಂತೆ ತನಿಖಾಧಿಕಾರಿಗಳಿಂದ ಅಂತಿಮ ವರದಿ ಬರಬೇಕಿದೆ. ಕೇವಲ ಐದು ನಿಮಿಷದಲ್ಲಿ ಈ ಘಟನೆ ನಡೆದಿದೆ. ಸದ್ಯಕ್ಕೆ ಚನ್ನಗಿರಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
* 25 ಜನರ ಬಂಧನ
ಆದಿಲ್ ಸಾವಿನ ಹಿನ್ನೆಲೆಯಲ್ಲಿ ಶವದೊಂದಿಗೆ ಕುಟುಂಬದವರು, ಒಂದು ಕೋಮಿನವರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಉದ್ರಿಕ್ತರ ಗುಂಪು ಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದ ಪ್ರಕರಣ ಸಂಬಂಧ 25 ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
ಕಲ್ಲು ತೂರಾಟ, ಕರ್ತವ್ಯಕ್ಕೆ ಅಡ್ಡಿ, ಪೊಲೀಸರ ಮೇಲೆ ಹಲ್ಲೆ ಹಾಗೂ ಸರ್ಕಾರಿ ಸ್ವತ್ತುಗಳನ್ನು ದ್ವಂಸಗೊಳಿಸಿದ್ದರ ಹಿನ್ನೆಲೆಯಲ್ಲಿ ಚನ್ನಗಿರಿ ಠಾಣೆಯಲ್ಲಿ 6 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ನಾಲ್ಕು ಪ್ರಕರಣಗಳಲ್ಲಿ 25 ಜನರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಬಂಧಿತರು ಚನ್ನಗಿರಿ ತಾಲೂಕಿನ ನಲ್ಲೂರು, ಹೊನ್ನೆಬಾಗಿ ಹಾಗೂ ಸುತ್ತಮುತ್ತಲ ಹಳ್ಳಿಯವರಾಗಿದ್ದಾರೆ ಎಂದು ತಿಳಿಸಿದರು.
ಮಟಕಾ ಜೂಜಾಟದ ಆರೋಪಿ ಆದಿಲ್‌ನನ್ನು ಮೇ 24ರ ರಾತ್ರಿ ವಿಚಾರಣೆಗೆ ಠಾಣೆಗೆ ಕರೆತಂದಾಗ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಕರೆದೊಯ್ದಗ ಮೃತಪಟ್ಟಿದ್ದ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಪ್ಪು ಗ್ರಹಿಕೆಯಿಂದಾಗಿ ಮೃತನ ಕುಟುಂಬದವರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಉದ್ರಿಕ್ತ ಗುಂಪು ಠಾಣೆ ಮೇಲೆ ಕಲ್ಲಿ ತೂರಾಟ ನಡೆಸಿತ್ತು ಎಂದರು.
ಚನ್ನಗಿರಿ ಘಟನೆ ಸಂಬಂಧ ಸಾರ್ವಜನಿಕರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಅಥವಾ ಪ್ರಚೋದನಾತ್ಮಕ ಹೇಳಿಕೆ , ಪೋಸ್ಟ್, ವಿಡಿಯೋ ಅಥವಾ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬಾರದು. ಹಾಗೆ ಮಾಡಿದ್ದಲ್ಲಿ ಕಾನೂನುಕ್ರಮ ಜರುಗಿಸಲಾಗುವುದು ಎಂದೂ ಎಸ್ಪಿ ತಿಳಿಸಿದರು.