ಸರ್ಕಾರಿ ಶಾಲೆಗೆ ಮೂಲ ಸೌಕರ್ಯಕ್ಕೆ ಮನವಿ

dvg-school.jpg
Published on

ದಾವಣಗೆರೆ  : ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ದಾವಣಗೆರೆ ಉತ್ತರ ವಲಯದ ನರಸೀಪುರ ಗ್ರಾಮದಲ್ಲಿ ಮಂಗಳವಾರ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಹಳ್ಳಿ ಮಟ್ಟದ ಸಮಾವೇಶ ಆಯೋಜಿಸಲಾಗಿತ್ತು.  ಕಾರ್ಯಕ್ರಮದ ಮೂಲಕ ಊರಿನ ಸರ್ಕಾರಿ ಶಾಲೆಯ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಲಾಯಿತು. ನರಸೀಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಬಹಳ ಚಿಕ್ಕದಾಗಿದ್ದು, ಮಕ್ಕಳಿಗೆ ಆಡಲು ಮೈದಾನವಿಲ್ಲ, ಶೌಚಗೃಹ ಸರಿಯಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಬೇಕಾದ ಸರ್ಕಾರಿ ಶಾಲೆಯು ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿ ಅವರ ಗಮನ ಸೆಳೆಯಲಾಯಿತು.  ಮಕ್ಕಳಿಗೆ ಆಡಲು ಮೈದಾನ, ಶುಚಿಯಾದ ಶೌಚಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದರ ಜತೆಗೆ ಮಕ್ಕಳ ಬೆಳವಣಿಗೆಯ ದೃಷ್ಟಿಯಿಂದ ಕನ್ನಡ ಮಾಧ್ಯಮದ ಜತೆಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಒದಗಿಸಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಲಾಯಿತು.  ಅದಕ್ಕೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿ ಮಾತನಾಡಿ, ತ್ವರಿತ ಗತಿಯಲ್ಲಿ ಶೌಚಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ. ಮೈದಾನಕ್ಕೆ ಸಂಬಂಧಿಸಿದಂತೆ ಹಕ್ಕುಪತ್ರಗಳನ್ನು ಪರಿಶೀಲಿಸಿ ಕಂದಾಯ ಇಲಾಖೆಯ ಜತೆಗೆ ಮಾತನಾಡುತ್ತೇವೆ. ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಆಶ್ವಾಸನೆ ನೀಡಿದರು.  ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ನರಸೀಪುರ ಶಾಲೆ ಉಳಿಸಿ ಹೋರಾಟ ಸಮಿತಿಯ ಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net