ರಾಮಮಂದಿರ ರಾಷ್ಟ್ರ ಭಕ್ತಿ, ಸ್ವಾಭಿಮಾನದ ಪ್ರತೀಕ

dvg rama mandira oct 6
Published on

ದಾವಣಗೆರೆ: ರಾಮಮಂದಿರ ನಿರ್ಮಾಣ ರಾಷ್ಟ್ರ ಭಕ್ತಿಯ ಪ್ರತೀಕವಾಗಿದೆ. ಹಿಂದು ಸಂಸ್ಕೃತಿ, ಸ್ವಾಭಿಮಾನದ ಸಂಕೇತವಾಗಿದೆ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಪಿಜೆ ಬಡಾವಣೆಯ ರಾಮಮಂದಿರದಲ್ಲಿ ಮಂಗಳವಾರ, ಅಯೋಧ್ಯೆ ಶ್ರೀರಾಮಮಂದಿರಕ್ಕೆ ಸಮರ್ಪಿಸುವ 15 ಕೆಜಿ ಬೆಳ್ಳಿ ಇಟ್ಟಿಗೆಯನ್ನು ಸ್ವಾಗತಿಸುವ ಹಾಗೂ ಪೂಜೆ ಸಲ್ಲಿಸುವ ಸಮಾರಂಭದಲ್ಲಿ ಮಾತನಾಡಿದರು.

ರಾಮಮಂದಿರ ನಿರ್ಮಾಣ ನೂರಾರು ವರ್ಷಗಳ ಕನಸು. ಪ್ರಧಾನಿ ಮೋದಿ ನಾಯಕತ್ವದಲ್ಲಿ ಆ ಶುಭ ಯೋಗ ಕೂಡಿಬಂದಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳಿಂದ ತಲಾ ಒಂದು ಇಟ್ಟಿಗೆ ತರಿಸಿ ಅಯೋಧ್ಯೆಗೆ ಕಳಿಸಿಕೊಡುವ ಸೂಚನೆಗಳು ಕಂಡುಬರುತ್ತಿದ್ದು, ಆ ಪ್ರಯತ್ನ ನಡೆಯಲಿ, ಈ ಮಹತ್ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಲಿ ಎಂದು ಆಶಿಸಿದರು.

ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಮಾತನಾಡಿ, 1990ರಲ್ಲಿ ರಾಮಜ್ಯೋತಿ ರಥಯಾತ್ರೆಯು ದಾವಣಗೆರೆಗೆ ಬಂದಾಗ ಸಂಭವಿಸಿದ ಘರ್ಷಣೆಯಲ್ಲಿ 8 ಯುವಕರು ಹುತಾತ್ಮರಾಗಿದ್ದರು. 72 ಜನ ಗಾಯಗೊಂಡಿದ್ದರು. ಈಗ ರಾಮಮಂದಿರ ನಿರ್ಮಾಣದ ಸಂಕಲ್ಪ ಈಡೇರುತ್ತಿದೆ ಎಂದರು.

ಕರೊನಾ ಆತಂಕ ದೂರವಾದ ನಂತರ ಜನಪ್ರತಿನಿಧಿಗಳು, ಮುಖಂಡರೊಂದಿಗೆ ಚರ್ಚಿಸಿ, ನಗರದಲ್ಲಿ ಬೃಹತ್ ಸಮಾರಂಭ ಆಯೋಜಿಸಿ, ಪೇಜಾವರ ಶ್ರೀಗಳ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಈ ಕಾರ್ಯದ ಹಿಂದೆ ರಾಜಕೀಯ ಉದ್ದೇಶವಿಲ್ಲ. ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇಕ್ಕುಮದ್ದು ಹಾಕುವ (ಕೆಟ್ಟದ್ದನ್ನು ಬಯಸುವ) ಕೆಲವರ ಆಲೋಚನೆ ಹಾಗಿದೆ ಎಂದರು.

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸಂಕಲ್ಪ ನೆರವೇರುತ್ತಿದೆ. ಇದಕ್ಕೆ 500 ವರ್ಷಗಳ ಹೋರಾಟದ ಇತಿಹಾಸವಿದೆ. ಇಂಥ ಯಾವುದೇ ಮಹತ್ಕಾರ್ಯವಾಗಬೇಕಾದರೆ ಸಂಕಲ್ಪ ಮುಖ್ಯ ಎಂದರು.

ರಾಮಜ್ಯೋತಿ ರಥಯಾತ್ರೆ ವೇಳೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಯುವಕರ ತಾಯಂದಿರಾದ ರತ್ನಮ್ಮ ಹಾಗೂ ಶಾರದಾಬಾಯಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಉಪ ಮೇಯರ್ ಸೌಮ್ಯಾ ಇದ್ದರು.

ಇದಕ್ಕೂ ಮೊದಲು ನಡೆದ ಬೆಳ್ಳಿ ಇಟ್ಟಿಗೆ ಪೂಜೆ ಸಂದರ್ಭದಲ್ಲಿ ಮೇಯರ್ ಬಿ.ಜಿ.ಅಜಯಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್, ಸದಸ್ಯ ಶಿವನಗೌಡ ಪಾಟೀಲ್, ಬಿಜೆಪಿ ಯುವ ಮೋರ್ಚಾದ ಪಿ.ಸಿ.ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net