ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಹಸಿಗಳಿಗೆ ಅವಕಾಶ

Hrr10Kim1.jpg
Published on

ಹರಿಹರ  : ಚಲನಶೀಲತೆ, ಸ್ಪರ್ಧಾತ್ಮಕತೆ ಹಾಗೂ ಅನಿಶ್ಚಿತತೆಯಿಂದ ಕೂಡಿದ ಜಗತ್ತಿನಲ್ಲಿ ಸಾಹಸಿಗಳಿಗೆ ಮಾತ್ರ ಅವಕಾಶಗಳು ಲಭ್ಯವಾಗುತ್ತವೆ ಎಂದು ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ಕರ್ನಾಟಕ ಘಟಕ ಅಧ್ಯಕ್ಷ ರವೀಂದ್ರ ಶ್ರೀಕಾಂತ್ ಹೇಳಿದರು.  ನಗರದ ಕಿರ್ಲೋಸ್ಕರ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಕಿಮ್) ಸಂಸ್ಥೆಯಲ್ಲಿ ಶನಿವಾರ ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ (ಪಿಜಿಡಿಎಂ)-2025ರ 160 ವಿದ್ಯಾರ್ಥಿಗಳಿಗೆ ನಡೆದ ಘಟಿಕೋತ್ಸವದಲ್ಲಿ ಮಾತನಾಡಿದರು.  ನೌಕರರಾಗಲಿ, ವ್ಯಾಪಾರ, ಉದ್ದಿಮೆ ಮಾಡುವವರಾಗಲಿ ಸೌಕರ್ಯಯುತ, ಸುಲಭ ಎನಿಸುವ ವಲಯ ಆಯ್ಕೆ ಮಾಡಿದರೆ ಹೆಚ್ಚಿನ ಸಾಧನೆ ಮಾಡಲಾಗದು. ಅನಾವರಣವಾಗದ ಮಾರುಕಟ್ಟೆಯನ್ನು ಸೃಷ್ಟಿಸಿದರೆ ಅಲ್ಲಿ ನಾವೇ ಯಶಸ್ವಿ ಉದ್ಯಮದಾರರಾಗಿ ಬೆಳೆಯಲು ಸಾಧ್ಯವಿರುತ್ತದೆ ಎಂದರು.  ಕೆಎಫ್‌ಐಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಕಿರ್ಲೋಸ್ಕರ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹರಿಹರದ ಗವರ್ನಿಂಗ್ ಕೌನ್ಸಿಲ್ ಪ್ರತಿನಿಧಿಯಾದ ರವೀಂದ್ರನಾಥ್ ಗುಮಾಸ್ತೆ ಘಟಿಕೋತ್ಸವ ಉದ್ಘಾಟಿಸಿದರು. ಹಿರಿಯ ಉಪನ್ಯಾಸಕ ಡಾ.ವಿ.ಎಸ್. ಪೈ 2024-2025 ಸಾಲಿನ ಸಂಸ್ಥೆಯ ವಾರ್ಷಿಕ ಸಾಧನೆಗಳನ್ನು ವಾಚಿಸಿದರು.  ಬಂಗಾರ ಪದಕ ವಿಜೇತೆ ರುಪಾಯನ್ ಬ್ಯಾನರ್ಜಿ, ಬೆಳ್ಳಿ ಪದಕ ವಿಜೇತೆ ಶ್ರೀಜಿತಾ ಅವರನ್ನು ಗೌರವಿಸಲಾಯಿತು. ರುಪಾಯನ್ ಬ್ಯಾನರ್ಜಿ (ಫೈನಾನ್ಸ್), ಸಾಕ್ಷಿ ಶರ್ಮಾ (ಮಾರ್ಕೆಟಿಂಗ್), ಜಯಶ್ರೀ ವೆಣಿ ಪುಪ್ಪಾಲ (ಮಾನವ ಸಂಪನ್ಮೂಲ), ಉಜ್ಜ್ವಲ್ ಕುಮಾರ್ ಪಾಲ್ (ಆಪರೇಷನ್ಸ್) ಮತ್ತು ಸಾಂಗ್ರಂ ದಾಸ್ (ಆಪರೇಷನ್ಸ್) ಅವರಿಗೆ ವಿಶೇಷ ಕ್ಷೇತ್ರಗಳಲ್ಲಿನ ಉನ್ನತ ಸಾಧನೆಗಾಗಿ ಡೊಮೇನ್ ಪ್ರಾವೀಣ್ಯ ಪ್ರಶಸ್ತಿಗಳನ್ನು ನೀಡಲಾಯಿತು.  ಬ್ಯಾಂಕ್ ಆಫ್ ಬರೋಡಾದ ವಲಯ ಪ್ರಬಂಧಕ ಪಂಕಜ್ ಕುಮಾರ್ ಸುಮನ್ ಅವರು, ಶೈಕ್ಷಣಿಕ, ಕ್ರೀಡೆ ಮತ್ತು ಸರ್ವತೋಮುಖ ವರ್ಗದಲ್ಲಿ ಗುರುತಿಸಲಾದ ಸಾಧಕರಿಗೆ ನಗದು ಬಹುಮಾನಗಳನ್ನು ವಿತರಿಸಿದರು.  ಅಕಾಡೆಮಿಕ್ಸ್ ಡೀನ್ ಡಾ.ನಾಗರಾಜ್ ಬಿ.ವಿ, ಸ್ನಾತಕ ವಿದ್ಯಾರ್ಥಿಗಳಿಗೆ ವೃತ್ತಿ ನೈಪುಣ್ಯ ಮತ್ತು ನೀತಿಶಾಸ್ತ್ರದ ಪ್ರತಿಜ್ಞೆಯನ್ನು ಬೋಧಿಸಿದರು.  ಉಪನ್ಯಾಸಕಿ ಡಾ.ಸವಿತಾ ಜಿ. ಲಕ್ಕೋಲ್, ವಂದಿಸಿದರು. ಶಾಂತಿಕಾ ಯು.ಎಂ. ಮತ್ತು ಕಿರಣ್ ಕುಮಾರ್ ಜಿ.ಕೆ. ಕಾರ್ಯಕ್ರಮ ನಿರೂಪಿಸಿದರು.  ಹರಿಹರದ ಕಿಮ್ ಸಂಸ್ಥೆ ಗವರ್ನಿಂಗ್ ಕೌನ್ಸಿಲ್ ಸದಸ್ಯ ವಿಂಗ್ ಕಮಾಂಡರ್ ಎ. ರಘುನಾಥ್, ಕೆಐಎಫ್‌ಎಲ್ ಕೊಪ್ಪಳದ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ನಾರಾಯಣ, ಪುಣೆಯ ಕಿಮ್ ಸಂಸ್ಥೆ ನಿರ್ದೇಶಕ ಡಾ. ಟಿ.ಜಿ. ವಿಜಯ  ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net