

ದಾವಣಗೆರೆ : ಬದುಕಿನ ಏರುಪೇರುಗಳ ನಡುವೆಯೆ ಜೀವನೋತ್ಸಾಹವನ್ನು ನಿರಂತರವಾಗಿ ಕಾಪಿಟ್ಟುಕೊಳ್ಳಬೇಕು ಎಂದು ಹರಿಹರ ಎಂಕೆಇಟಿ ಶಿಕ್ಷಣ ಸಂಸ್ಥೆಯ ಡೀನ್ ಡಾ.ಬಿ.ಟಿ. ಅಚ್ಯುತ್ ಹೇಳಿದರು. ನಗರದ ಸದ್ಯೋಜಾತ ಶಿವಾಚಾರ್ಯ ನಿಕೇತನ ಹಿರೇಮಠದಲ್ಲಿ ಬುಧವಾರ ಅನಂತ ಚೇತನ ಪರಿವಾರ ಸಂಸ್ಥೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವ್ಯಕ್ತಿಯ ಜೀವನದಲ್ಲಿ ವಯಸ್ಸೆಂಬುದು ಕೇವಲ ಸಂಖ್ಯೆ ಅಷ್ಟೆ. ಬದುಕನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದು ನಮ್ಮ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಸಕಾರಾತ್ಮಕ ಆಲೋಚನೆಗಳೊಂದಿಗೆ ಕ್ರಿಯಾಶೀಲವಾಗಿದ್ದರೆ ವಯಸ್ಸಾಗಿದೆ ಎಂಬ ಭಾವನೆ ಬರುವುದಿಲ್ಲ ಎಂದರು. ಕೆಲವರಲ್ಲಿ ಜೀವನೋತ್ಸಾಹವೇ ಇರುವುದಿಲ್ಲ. ವಯಸ್ಸಾಯಿತು, ಜೀವನ ಸಾಕಾಗಿ ಹೋಗಿದೆ ಎನ್ನುವವರಿದ್ದಾರೆ. ಮತ್ತೆ ಕೆಲವರು ಖುಷಿಯಿಂದ ಬದುಕು ಸಾಗಿಸುತ್ತಾರೆ. ದಿನದ ಆರಂಭ ಉತ್ತಮವಾಗಿದ್ದರೆ ಇಡೀ ದಿನ ಸಂತೋಷಮಯವಾಗಿ ಕಳೆಯುತ್ತದೆ. ಅಂಥ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಸಮಾಜದಲ್ಲಿ ನಮ್ಮ ಬಗ್ಗೆ ಆಡಿಕೊಳ್ಳುವವರು, ಹೊಟ್ಟೆಕಿಚ್ಚು ಪಡುವವರು ಇರುತ್ತಾರೆ. ಅದನ್ನು ಕೇಳಿಸಿಕೊಳ್ಳದೆ ಮುಂದುವರಿಯಬೇಕು. ಕೆಟ್ಟ ಆಲೊಚನೆಗಳನ್ನು ಬಿಡಬೇಕು. ನಾವು ಖುಷಿಯಾಗಿರುವ ಜತೆಗೆ ಇತರರೂ ಸಂತೋಷವಾಗಿ ಇರುವಂತೆ ನೋಡಿಕೊಳ್ಳಬೇಕು. ಸೋಮಾರಿತನ ಬಿಡಬೇಕು ಎಂದು ತಿಳಿಸಿದರು. ಅನಂತ ಚೇತನ ಪರಿವಾರದಂಥ ಸಂಸ್ಥೆಯ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಮಹಿಲೆಯರು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಹೇಳಿದರು. ಕಲಾಕುಂಚ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಮಾತನಾಡಿ, ನಮ್ಮ ಬದುಕು ದುಡಿಮೆಗೆ ಸೀಮಿತವಾಗದೆ ಸಮಾಜಮುಖಿಯಾಗಿ ಜೀವಿಸಬೇಕು. ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ವಹಿಸಬೇಕು. ಸಂಸ್ಕಾರಯುತವಾಗಿ ಬಾಳಬೇಕು ಎಂದು ಅಭಿಪ್ರಾಯಪಟ್ಟರು. ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ಈ ರೀತಿ ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಪ್ರತಿಭೆ ಅನಾವರಣಕ್ಕೆ ಇಂಥ ವೇದಿಕೆಗಳು ಸಹಕಾರಿಯಾಗುತ್ತವೆ. ನಾವು ಸಂತೋಷವಾಗಿದ್ದರೆ ಕುಟುಂಬ, ಸಮಾಜ ಚೆನ್ನಾಗಿರುತ್ತದೆ ಎಂದು ತಿಳಿಸಿದರು. ಅನಂತ ಚೇತನ ಪರಿವಾರ ಸಂಸ್ಥೆಯ ಸಂಸ್ಥಾಪಕಿ ಡಾ. ಆರತಿ ಸುಂದರೇಶ್ ಮಾತನಾಡಿ, ಚೈತನ್ಯ ಎಂಬುದು ಒಂದು ದಿನಕ್ಕೆ ಸೀಮಿತವಾಗದೆ, ಜೀವನದ ಕೊನೆಯವರೆಗೂ ಇರಬೇಕು. ಎಲ್ಲರಿಗೂ ಬದುಕಿನ ಬಗ್ಗೆ ಒಲವಿರಬೇಕು. ನಮ್ಮೆಲ್ಲರಲ್ಲಿ ಜೀವನೋತ್ಸಾಹ ಚಿರವಾಗಿರಲೆಂದೇ ಅನಂತ ಪರಿವಾರವನ್ನು ಆರಂಭಿಸಿದ್ದೇವೆ ಎಂದರು. ಪರಿವಾರದ ಅಧ್ಯಕ್ಷೆ ಸುಮಾ ಸದಾನಂದ್, ಪ್ರಧಾನ ಕಾರ್ಯದರ್ಶಿ ನೀಲಮ್ಮ ಬೆಳ್ಳೂಡಿ, ಖಜಾಂಚಿ ಚೇತನಾ ಚಿದಂಬರಂ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಪರಿವಾರ ಸದಸ್ಯರು ಭಾಗವಹಿಸಿದ್ದರು. ಭವಾನಿ ಶಂಭುಲಿಂಗಪ್ಪ ಪ್ರಾರ್ಥಿಸಿದರು. ಬಾಲಕಿ ಮಾನ್ವಿತಾ ಗಣೇಶನನ್ನು ಸ್ತುತಿಸಿದರು. ವಾತಾಪಿ ಗಣಪತಿ ಹಾಡಿಗೆ ನವ್ಯಾ ರಾಯ್ಕರ್ ನೃತ್ಯ ಪ್ರದರ್ಶಿಸಿದರು. ಸುನಂದಾ, ಉಷಾ ಲಿಂಗರಾಜ್ ಹಾಗೂ ಉಮಾ ಯಲ್ಲಪ್ಪ ಪರಿಸರ ಗೀತೆ ಹಾಡಿದರು. ಸರಳಾ ಶಾಂತಿನಾಥ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಬಹುಮಾನ ವಿತರಣೆ ಕಾರ್ಯಕ್ರಮವನ್ನು ಚಂದನಾ ವಿಜಯ ಕುಮಾರ್ ನಡೆಸಿಕೊಟ್ಟರು. ಸುಕನ್ಯಾ ಬೆಳ್ಳೂಡಿ ನಿರೂಪಿಸಿದರು. ಶಾಂತಾ ತಿಪ್ಪಣ್ಣ ವಂದಿಸಿದರು.