

ಶಿವಮೊಗ್ಗ: ಮನೆಯಲ್ಲೇ ತಾಯಿ ಶವದ ಜತೆ ಮಗಳು ಐದು ದಿನ ಕಾಲ ಕಳೆದಿದ್ದಾಳೆ! ದುರ್ವಾಸನೆಯ ಜಾಡು ಹಿಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಮನೆಯ ಒಳ ಹೋಗಿ ನೋಡಿದಾಗ ಪ್ರಕರಣ ಬಯಲಾಗಿದೆ.
ನಗರದ ಬಸವನಗುಡಿಯ ಐದನೇ ತಿರುವಿನ ಮನೆಯೊಂದರಲ್ಲಿ 65 ವರ್ಷದ ರಾಜೇಶ್ವರಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, 5 ದಿನದ ಹಿಂದೆಯೇ ವೃದ್ಧೆ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಈ ಮನೆಯಲ್ಲಿ ತಾಯಿ ಹಾಗೂ ಮಗಳು ಇಬ್ಬರೇ ವಾಸವಿದ್ದರು. ಇದು ಸಹಜ ಸಾವೋ ಅಥವಾ ಕೊಲೆಯೋ ಇನ್ನೂ ತಿಳಿದಿಲ್ಲ.
ರಾಜೇಶ್ವರಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೆಚ್ಚಿನ ಪ್ರಮಾಣದ ಔಷಧ ಸೇವನೆಯಿಂದ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಇವರ ಪುತ್ರಿ ಐದು ದಿನಗಳಿಂದ ಶವದೊಂದಿಗೆ ಇದ್ದದ್ದು ಹೇಗೆ? ಎಂಬ ಕುತೂಹಲ ವ್ಯಕ್ತವಾಗಿದೆ.
ರಾಜೇಶ್ವರಿ ಪುತ್ರಿ ಸ್ನಾತಕೋತ್ತರ ಪದವೀಧರೆ, ಅವಿವಾಹಿತೆ.ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಈಕೆಯನ್ನು ಸುರಭಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ರಹಸ್ಯ ತಿಳಿಯಲಿದೆ.