

ಇಸ್ಲಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಖೈರ್ಪುರ್ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಒಂದೇ ಕುಟುಂಬದ 13 ಮಂದಿ ಸಾವಿಗೀಡಾಗಿದ್ದರು. ಈ ಘಟನೆ ಸ್ಥಳೀಯರಲ್ಲಿ ಆಘಾತ ಉಂಟುಮಾಡಿತ್ತು. ತನಿಖೆ ಕೈಗೊಂಡ ಪೊಲೀಸರು ಕೊನೆಗೂ ಪ್ರಕರಣವನ್ನು ಭೇದಿಸಿದ್ದು, ಯುವತಿಯೊಬ್ಬಳನ್ನು ಬಂಧಿಸಿದ್ದಾರೆ.
ಬಂಧಿತ ಯುವತಿಯ ಹೆಸರು ಶಾಯಿಸ್ತಾ. ಅಘಾತಕಾತಿ ಸಂಗತಿ ಏನೆಂದರೆ, ಈಕೆ ಮೃತ ಕುಟುಂಬದ ಸದಸ್ಯರಲ್ಲಿ ಒಬ್ಬಳು. ಲವ್ ಮ್ಯಾರೇಜ್ ( Love Marriage ) ಮಾಡಿಕೊಳ್ಳಲು ಒಪ್ಪದಿದ್ದಕ್ಕೆ ಇಡೀ ಕುಟುಂಬಕ್ಕೆ ವಿಷವುಣಿಸಿ ಕೊಲೆ ಮಾಡಿದ್ದಾಳೆ. ಈ ಕೃತ್ಯಕ್ಕೆ ಸಾಥ್ ನೀಡಿದ ಆಕೆಯ ಪ್ರಿಯಕರ ಅಮಿರ್ ಬಕ್ಷ್ ಬ್ರೋಹಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆಹಾರದಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿಗಳಿಬ್ಬರು ಒಪ್ಪಿಕೊಂಡಿದ್ದಾರೆ. ನಮ್ಮಿಬ್ಬರ ಪ್ರೀತಿಗೆ ಎರಡೂ ಕುಟುಂಬದಿಂದ ವಿರೋಧವಿತ್ತು. ಹೀಗಾಗಿ ಈ ಕೃತ್ಯ ಎಸಗಿದೆವು ಎಂದು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಅಮೀರ್ ಭಕ್ಷ್ ಮತ್ತು ನಾನು ಪ್ರೀತಿಸುತ್ತಿದ್ದೆವು. ಆತನೇ ನನಗೆ ವಿಷವನ್ನು ತಂದುಕೊಟ್ಟನು. ನಿಮ್ಮ ಇಡೀ ಕುಟುಂಬಕ್ಕೆ ವಿಷ ಹಾಕಿ ಕೊಂದು, ಆನಂತರ ನಾವಿಬ್ಬರು ಮದುವೆಯಾಗೋಣ. ನಿಮ್ಮ ತಂದೆ ಮತ್ತು ನನ್ನ ತಂದೆ ಸತ್ತರೆ, ನಮಗೆ ಯಾರ ವಿರೋಧವೂ ಇರುವುದಿಲ್ಲ ಎಂದು ಅಮೀರ್ ನನ್ನನ್ನು ಪ್ರಚೋದಿಸಿದನು. ಇದಾದ ಬಳಿಕ ನಾನು ಗೋಧಿ ಹಿಟ್ಟಿಗೆ ವಿಷವನ್ನು ಬೆರೆಸಿದೆ. ಅಮೀರ್ ಭಕ್ಷ್ ಅವರ ತಂದೆ ಸೇರಿದಂತೆ ಇಡೀ ಕುಟುಂಬದ ಸಾವಿಗೆ ಕಾರಣವಾಯಿತು ಎಂದು ಶಾಯಿಸ್ತಾ ಭಯಾನಕ ಸಂಗತಿಯನ್ನು ಬಿಚ್ಚಿಟ್ಟಿದ್ದಾಳೆ.
ಅಂದಹಾಗೆ ಈ ಭೀಕರ ಕೃತ್ಯ ಆಗಸ್ಟ್ 17 ರಂದು ಖೈರ್ಪುರ್ ಜಿಲ್ಲೆಯ ಪಿರ್ಜೋ ಗೋಥ್ ಪ್ರದೇಶದಲ್ಲಿ ನಡೆದಿದೆ. ಕಾರ್ಮಿಕ ಗುಲ್ ಬೇಗ್, ಅವರ ಪತ್ನಿ, ಎಂಟು ಮಕ್ಕಳು ಮತ್ತು ಇತರ ಸಂಬಂಧಿಕರು ಸೇರಿದಂತೆ ಕುಟುಂಬ ಸದಸ್ಯರು ವಿಷಪೂರಿತ ಊಟವನ್ನು ಸೇವಿಸಿ, ದುರಂತ ಸಾವಿಗೀಡಾದರು. ಮೃತ ಮಕ್ಕಳ ವಯಸ್ಸು 4 ರಿಂದ 20 ವರ್ಷ ಎಂದು ತಿಳಿದುಬಂದಿದೆ.
ಮೃತರು ವಿಷ ಸೇವಿಸಿರುವುದು ಮರಣೋತ್ತರ ಪರೀಕ್ಷಾ ವರದಿಯಲ್ಲೂ ದೃಢಪಟ್ಟಿದೆ. ಶಾಯಿಸ್ತಾ ಮತ್ತು ಅಮೀರ್ ಭಕ್ಷ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)