ಅಪ್ಪನ ಅಂತ್ಯ ಸಂಸ್ಕಾರ ಮಾಡಲು ಹಣ ಕೇಳಿದ ಮಗ! ಕಡೆಗೆ ಮಗಳಿಂದಲೇ ಅಪರಕ್ರಿಯೆ…

final rites
Published on

ಆಂಧ್ರಪ್ರದೇಶ: ತಂದೆಯ ಅಂತ್ಯ ಸಂಸ್ಕಾರವನ್ನು ಮಾಡಲು ತನ್ನ ಸಹೋದರ ಹಣಕ್ಕೆ ಬೇಡಿಕೆಯಿಟ್ಟಿದ್ದಕ್ಕೆ ವಿಧಿಯಿಲ್ಲದೇ ಮಗಳು ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಈ ವಿಚಿತ್ರ ಘಟನೆ ನಡೆದದ್ದು ಆಂಧ್ರಪ್ರದೇಶದ ಎನ್​ಟಿಆರ್​ ಜಿಲ್ಲೆಯ ಪೆನುಗಂಜಿಪ್ರೋಲು ಮಂಡಲದ ಅಣಿಗಂಡ್ಲಪಾಡು ಗ್ರಾಮದಲ್ಲಿ.

ಮೃತ ಗಿಂಜುಪಲ್ಲಿ ಕೋಟಯ್ಯ(80) ಹಾಗೂ ಅವರ ಮಗನ ನಡುವೆ ಆಸ್ತಿ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಕೋಟಯ್ಯ ಅವರು ತಮ್ಮ ಜಮೀನು ಮಾರಾಟ ಮಾಡಿ ಒಂದು ಕೋಟಿ ರೂ. ಪಡೆದಿದ್ದರು. ಅದರಲ್ಲಿ ಮಗನಿಗೆ ರೂ.70 ಲಕ್ಷ ನೀಡಿ ಉಳಿದ ರೂ.30 ಲಕ್ಷವನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದರು.

ಕೋಟಯ್ಯನ ಮಗ ತಂದೆ ನೀಡಿದ ಹಣದಿಂದ ತೃಪ್ತನಾಗಲಿಲ್ಲ. ಇನ್ನಷ್ಟು ಬೇಕು ಎನ್ನುವ ಆಸೆಗೆ ಬಿದ್ದ ಮಗ, ಉಳಿದ 30 ಲಕ್ಷ ರೂಪಾಯಿಗಳನ್ನು ತನಗೆ ನೀಡುವಂತೆ ತಂದೆಗೆ ಒತ್ತಾಯ ಮಾಡುತ್ತಿದ್ದ. ಇದಕ್ಕಾಗಿ ಕೋಟಯ್ಯನಿಗೆ ಆಗಾಗ ಕಿರುಕುಳ ಕೂಡ ನೀಡುತ್ತಿದ್ದ ಎನ್ನಲಾಗಿದೆ.

ಹಣ ಕೊಡಲು ತಪ್ಪಿದರೆ ತಂದೆಗೆ ಕೊಲೆ ಬೆದರಿಕೆಯನ್ನೂ ಈತ ಹಾಕಿದ್ದ. ಈ ಪಾಪಿ ಮಗ, ತನ್ನ ತಂದೆಗೆ ದೈಹಿಕವಾಗಿ ಚಿತ್ರಹಿಂಸೆಯನ್ನೂ ನೀಡಿದ್ದಾನೆ. ಮಗನ ಚಿತ್ರಹಿಂಸೆ ತಾಳಲಾರದೆ ಕೋಟಯ್ಯ ಅವರು ಪತ್ನಿ ಸಮೇತ ಕೆಲ ಸಮಯದ ಹಿಂದೆ ಗುಮ್ಮಡಿದೂರು ಗ್ರಾಮದ ಮಗಳು ವಿಜಯಲಕ್ಷ್ಮಿ ಅವರ ಮನೆಗೆ ಹೋಗಿದ್ದರು. ನಂತರ ದಂಪತಿಗಳು ತಮ್ಮ ಮಗಳ ಮನೆಯಲ್ಲಿಯೇ ಇದ್ದರು. ಇದಾದ ಬಳಿಕ ಕೋಟಯ್ಯ ಮೃತಪಟ್ಟಿದ್ದರು. ಈ ಸಂದರ್ಭ ಅಂತ್ಯಕ್ರಿಯೆ ನೆರವೇರಿಸಪ್ಪಾ ಎಂದು ಹಿರಿಯರು ಮಗನಿಗೆ ಹೇಳಿದರೂ ಉಳಿದ 30 ಲಕ್ಷ ರೂ. ಹಣ ಕೊಡದಿದ್ದಲ್ಲಿ ಅಂತ್ಯಕ್ರಿಯೆಯನ್ನೇ ಮಾಡುವುದಿಲ್ಲ ಎಂದು ಈತ ಪಟ್ಟು ಹಿಡಿದು ಕುಳಿತಿದ್ದ. ಕಡೆಗೆ ಸಹೋದರನ ಅವಾಂತರಕ್ಕೆ ರೋಸಿ ಹೋದ ಸಹೋದರಿ, ತಾನೇ ತನ್ನ ತಂದೆಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net