

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿರುವ ದತ್ತಾತ್ರೇಯಪೀಠ ಹಾಗೂ ಬಾಬಾ ಬುಡನ್‌ಗಿರಿ ದರ್ಗಾ ಗೊಂದಲ, ವಿವಾದವನ್ನು ಶಾಶ್ವತವಾಗಿ ಬಗೆಹರಿಸುವುದು ರಾಜ್ಯ ಸರ್ಕಾರದ ದೃಢ ಸಂಕಲ್ಪವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ವಿಧಾನಸೌದ ಸಮ್ಮೇಳನ ಸಭಾಂಗಣದಲ್ಲಿ ಈ ವ್ಯಾಜ್ಯದ ಕುರಿತು ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಧಾರ್ಮಿಕ ಮುಖಂಡರು ಹಾಗೂ ಅಧಿಕಾರಿಗಳ ಜಂಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಚಂದ್ರದ್ರೋಣ ಪರ್ವತದಲ್ಲಿನ ಪೀಠ ಹಾಗೂ ದರ್ಗಾವು ರಾಜ್ಯದ ಭಾವೈಕ್ಯ ಸ್ಥಳಗಳಲ್ಲಿ ಒಂದಾಗಿದ್ದು, 1975ರವರೆಗೆ ಒಂದು ರೀತಿಯ ಕಾರ್ಯಕ್ರಮಗಳು ನಡೆದಿವೆ. ನಂತರ ಅನೇಕ ಬದಲಾವಣೆಗಳಾಗಿ ಗೊಂದಲ, ವಿವಾದದ ಸ್ವರೂಪ ಪಡೆದುಕೊಂಡಿದೆ ಎಂದರು.
ಸಮಸ್ಯೆ ಪರಿಹರಿಸಲು ಸರ್ಕಾರ, ಸಂಘ-ಸಂಸ್ಥೆಗಳು, ಧಾರ್ಮಿಕ ಮುಖಂಡರು ಅನೇಕ ಪ್ರಯತ್ನ ಮಾಡಿದ್ದಾರೆ. ಆದಾಗ್ಯೂ ಕೆಲವರು ಕೋರ್ಟ್‌ಗೆ ಮೊರೆ ಹೋಗಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿ ತಮ್ಮದೇ ಆದ ನಿಲುವು ಪ್ರತಿಪಾದಿಸಿದ್ದಾರೆ.
ಸರ್ಕಾರ ರಚಿಸಿದ ವಿವಿಧ ಉಪಸಮಿತಿಗಳು ಮಾಹಿತಿ, ಪುರಾವೆ, ದಾಖಲೆಗಳನ್ನು ಸಂಗ್ರಹಿಸಿ ಕೋರ್ಟ್‌ಗೆ ಗಮನಕ್ಕೆ ತಂದ ನಂತರ ತೀರ್ಪುಗಳು ಬಂದಿವೆ. ಇದನ್ನು ಒಪ್ಪದ ಕೆಲವರು ಸುಪ್ರೀಂ ಕೋರ್ಟ್‌ಗೆ ಪ್ರತ್ಯೇಕವಾಗಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂದರು.
ವ್ಯಾಜ್ಯದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ 7-1-2025ರಂದು ಕೈಗೆತ್ತಿಕೊಂಡು, ಮತ್ತೆ ಮತ್ತೆ ವಿಚಾರಣೆ ಮುಂದೂಡುವುದು ಸಾಧ್ಯವಿಲ್ಲ. ಗೊಂದಲದ ಬಗ್ಗೆ 24-3-2025ರೊಳಗೆ ಸ್ಪಷ್ಟ ಅಭಿಪ್ರಾಯ ಸಹಿತ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಾದಕ್ಕೆ ಅಂತಿಮ ಪರಿಹಾರ ಕಂಡುಕೊಳ್ಳಲು ಸಚಿವ ಸಂಪುಟದ ಉಪ ಸಮಿತಿ ರಚಿಸಿದೆ. ಸಮಿತಿಯು ನಾಲ್ಕೈದು ಸಭೆಗಳನ್ನು ನಡೆಸಿದ್ದು, ಇದೀಗ ಸುಪ್ರೀಂ ಕೋರ್ಟ್ ಮೂರು ಗಡುವು ವಿಧಿಸಿದ ಹಿನ್ನೆಲೆಯಲ್ಲಿ ಜಂಟಿ ಸಭೆ ಕರೆದು ಚರ್ಚಿಸಲಾಗಿದೆ.
ಸಭೆಯಲ್ಲಿ ಪಾಲ್ಗೊಂಡ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಹಿಂದು ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ವ್ಯಾಜ್ಯದ ಇತ್ಯರ್ಥಕ್ಕೆ ಸಲಹೆ, ಅಭಿಪ್ರಾಯಗಳನ್ನು ನೀಡಿದ್ದು, ಎಲ್ಲವನ್ನೂ ದಾಖಲಿಸಿಕೊಳ್ಳಲಾಗಿದೆ. ಜತೆಗೆ ಪೂರಕವಾದ ದಾಖಲೆ, ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ವಿವರಿಸಿದರು.
ಜಂಟಿ ಸಭೆಯಲ್ಲಿ ನಡೆದ ಚರ್ಚೆಯ ವಿವರ, ದಾಖಲಿಸಿದ ಅಭಿಪ್ರಾಯ, ಸಲಹೆಗಳನ್ನು ಕ್ರೋಡೀಕರಿಸಿ ದಾಖಲೆ, ಪುರಾವೆ, ಮಾಹಿತಿ ಜೋಡಿಸಲಾಗುವುದು. ಮುಂದಿನ ವಾರ ಸಚಿವ ಸಂಪುಟದ ಉಪ ಸಮಿತಿ ಸಭೆ ಸೇರಿ ಚರ್ಚಿಸಿ, ಅಂತಿಮ ವರದಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು.
ಸಚಿವ ಸಂಪುಟ ಸಭೆಯು ಈ ವರದಿಯನ್ನು ಅಂಗೀಕರಿಸಿದ ನಂತರ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಗಡುವಿನೊಳಗೆ ಸಲ್ಲಿಸಲಾಗುವುದು. ಶಾಂತಿ, ಸಾಮರಸ್ಯ ನೆಲೆಸಿಗೊಳಿಸುವುದು ಸರ್ಕಾರದ ಇಚ್ಛೆಯಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಈ ಸಭೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್, ಶಾಸಕರು, ಧಾರ್ಮಿಕ ಪ್ರಮುಖರು, ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.