

ಬೆಂಗಳೂರು: ನಗರದಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ಎಲ್ಲಾ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯುತ್ತಿದೆ. ಸರಣಿ ರಜೆಯಿರುವುದರಿಂದ ಶುಕ್ರವಾರವೇ ಬಹುತೇಕ ಕಚೇರಿ, ವ್ಯಾಪಾರಿ ಮಳಿಗೆಗಳಲ್ಲಿ ಪೂಜೆ ನೆರವೇರಿಸಲಾಯಿತು. ಹಾಗಾಗಿ ಶುಕ್ರವಾರದಿಂದಲೇ ಮಾರುಕಟ್ಟೆಗಳಲ್ಲಿ ವ್ಯಾಪಾರವಹಿವಾಟು ಭರ್ಜರಿಯಾಗಿತ್ತು.
ಕೆ.ಆರ್. ಮಾರುಕಟ್ಟೆ ಸೇರಿದಂತೆ ಗಾಂಧಿ ಬಜಾರ್, ಜಯನಗರ, ಮಲ್ಲೇಶ್ವರ, ಯಶವಂತಪುರ, ಮಡಿವಾಳ ವಿಜಯನಗರ ಸೇರಿ ಅನೇಕ ಮಾರುಕಟ್ಟೆಗೆ ಅಗತ್ಯ ಸಾಮಗ್ರಿಗಳನ್ನು ವ್ಯಾಪಾರಸ್ಥರು ತಂದಿದ್ದಾರೆ.
ಆಯುಧ ಪೂಜೆಗೆ ಅಗತ್ಯವಾದ ಬೂದುಗುಂಬಳದ ದರ ಆರಂಭದಲ್ಲಿ ಗಗನಕ್ಕೇರಿದೆ. ಕೆಜಿಗೆ 30 ರೂ. 40 ರೂ.ಇದೆ. ಕೆಲವೆಡೆ ಕಾಯಿಯ ಗಾತ್ರ ಆಧರಿಸಿ 150 ರೂ. 200 ರೂ.ಮಾರಾಟ ಮಾಡಲಾಗುತ್ತಿದೆ. ತಮಿಳುನಾಡು, ಆಂಧ್ರ ಪ್ರದೇಶದಿಂದ ಬೂದಗುಂಬಳಕಾಯಿ ಮಾರುಕಟ್ಟೆಗೆ ಬಂದಿದೆಯಾದರೂ ಮಳೆಯಿಲ್ಲದ ಕಾರಣಕ್ಕೆ ಇಳುವರಿ ಹೆಚ್ಚಿಲ್ಲ. ಹೀಗಾಗಿ ಬೂದುಗುಂಬಳ ಸೇರಿ ಹಣ್ಣು, ತರಕಾರಿ ಬೆಲೆ ದುಬಾರಿಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಕೈಗೆಟಕುವ ಬೆಲೆಯಲ್ಲಿದ್ದ ಹೂವು ಹಬ್ಬ ಸಮೀಪಿಸುತ್ತಿದ್ದಂತೆ ತುಟ್ಟಿಯಾಗಿದೆ. ಸುಗಂಧರಾಜ ಹೂವಿನ ಹಾರ 300 ರೂ. ದರಕ್ಕೆ ಮಾರಾಟವಾಗುತ್ತಿದೆ. ಕೆ.ಆರ್.ಮಾರುಕಟ್ಟೆಯಲ್ಲಿ ಗೌರಿಬಿದನೂರು, ಮೈಸೂರು ಮತ್ತಿತರ ಭಾಗಗಳಿಂದ ಬರುತ್ತಿರುವ ಸೇವಂತಿ ಹೂವು ಕೆಜಿಗೆ 200 ರೂ.250 ರೂ, ಚೆಂಡು ಹೂ ಕೆಜಿಗೆ 60 ರೂ.80 ರೂ. ಬೆಲೆಯಿದೆ. ತಮಿಳುನಾಡಿನಿಂದ ಬರುತ್ತಿರುವ ಮಲ್ಲಿಗೆ ಮೊಗ್ಗು ಕೆಜಿಗೆ 600 ರೂ ಇದೆ. ಕನಂಕಾಂಬರ ಬೆಲೆ ಕೂಡ ಹೆಚ್ಚಾಗಿದ್ದು ಕೆಜಿಗೆ 1 ಸಾವಿರ ತಲುಪಿದೆ.
ಸೇಬು, ಕಿತ್ತಳೆ, ಮೂಸಂಬಿ, ದಾಳಿಂಬೆ ಸೇರಿ ಇತರೆ ಹಣ್ಣುಗಳ ಬೆಲೆಯಲ್ಲೂ 30 ರೂ.ವ್ಯತ್ಯಾಸವಾಗಿದೆ. ಬಾಳೆಕಂದು 40- 60 ರೂ., ಮಾವಿನ ಎಲೆ ಕಟ್ಟು 50 ರೂ.ಬೆಲೆಯಿದೆ. ಸಿಹಿತಿನಿಸು ಬಾಕ್ಸ್ಗಳ ಬೇಡಿಕೆಯೂ ಹೆಚ್ಚಾಗಿದೆ.
ಕೆಜಿಗೆ ಯಾವ ಹೂವಿಗೆ ಎಷ್ಟಿದೆ ದರ?
ಸೇವಂತಿಗೆ-200-250ರೂ
ಮಲ್ಲಿಗೆ-600-800 ರೂ
ಕನಕಾಂಬರ-1000-1200 ರೂ
ಗುಲಾಬಿ-200-250 ರೂ
ಸುಗಂಧ-250 ರೂ
ಕಾಕಡ-500 ರೂ
ಚೆಂಡು ಹೂ 60-80 ರೂ.
ಪ್ರತಿ ವರ್ಷ ಹಬ್ಬದ ಸೀಸನ್ನಲ್ಲಿ ಹೂವಿನ ದರ ಹೆಚ್ಚಾಗುತ್ತದೆ. ಆದರೆ, ಈ ವರ್ಷ ನವರಾತ್ರಿ ಹಬ್ಬದ ಸಂದರ್ಭದಲ್ಲಿ ತುಸು ಹೆಚ್ಚೇ ದುಬಾರಿಯಾಗಿದೆ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.