

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ದರ್ಶನ್ರ ಜಾಮೀನು (Darshan Bail) ಅರ್ಜಿ ವಿಚಾರಣೆಯನ್ನು ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ, ಇದೀಗ ಅರ್ಜಿಯನ್ನು ವಜಾಗೊಳಿಸಿದೆ.
125 ದಿನಗಳಿಂದ ಜೈಲುವಾಸದಲ್ಲಿರುವ ನಟ ದರ್ಶನ್, ರೇಣುಕಸ್ವಾಮಿ ಕೊಲೆ ಪ್ರಕರಣದಿಂದ ಮುಕ್ತರಾಗಲು ಜಾಮೀನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಸುದೀರ್ಘವಾಗಿ ನಡೆಸಿದ ನ್ಯಾಯಾಲಯ, ಪೊಲೀಸ್ ಅಧಿಕಾರಿಗಳ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಮತ್ತು ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಮಂಡಿಸಿದ ವಾದ-ಪ್ರತಿವಾದಗಳನ್ನು ಸೂಕ್ಷ್ಮವಾಗಿ ಗಮನಿಸಿದ ಕೋರ್ಟ್, ಅಂತಿಮವಾಗಿ ಎ2 ಆರೋಪಿ ದರ್ಶನ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ದರ್ಶನ್ ಜಾಮೀನು ಅರ್ಜಿ ತೀರ್ಪು ಇಂದೇ ಮುಕ್ತಾಯಗೊಳ್ಳಲಿದೆ ಎಂದು ಈ ಹಿಂದೆಯೇ ನ್ಯಾಯಾಲಯ ತಿಳಿಸಿತ್ತು. ಅದರಂತೆಯೇ ಬೇಲ್ ವಿಚಾರಣೆ ನಡೆಸಿದ ಕೋರ್ಟ್, ಇಬ್ಬರ ಪರ ವಕೀಲರು ಮಂಡಿಸಿದ ವಾದವನ್ನು ಆಲಿಸಿ, ಇದೀಗ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಸದ್ಯ ಬೇಲ್ ನಿರೀಕ್ಷೆಯಲ್ಲಿದ್ದ ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಇದೀಗ ಭಾರೀ ನಿರಾಸೆ ಮೂಡಿದೆ.