ವೈಶಿಷ್ಟೃತೆಗೆ ಹೆಸರುವಾಸಿಯಾದ ದರಸಗುಪ್ಪೆ

ವೈಶಿಷ್ಟೃತೆಗೆ ಹೆಸರುವಾಸಿಯಾದ ದರಸಗುಪ್ಪೆ
Published on

ಭರತ್‌ಕುಮಾರ್ ಎಚ್.ಎಸ್.ಶ್ರೀರಂಗಪಟ್ಟಣ
ತಾಲೂಕಿನ ಒಡಲಿನಲ್ಲಿ ಬಗೆದಷ್ಟು ಇತಿಹಾಸ ಹಾಗೂ ವೈಶಿಷ್ಟೃತೆಯ ಮಹಾಪೂರವೇ ಅಡಗಿದೆ. ಇಲ್ಲಿನ ಪ್ರತಿ ಸ್ಮಾರಕ ಮಾತ್ರವಲ್ಲ ಇಲ್ಲಿನ ಪ್ರತಿಯೊಂದು ಸ್ಥಳ ಕೂಡ ಆಸಕ್ತಿದಾಯಕ ಮಾಹಿತಿಯನ್ನು ಒಳಗೊಂಡಿದೆ. ಈ ಸಾಲಿನಲ್ಲಿ ದರಸಗುಪ್ಪೆ ಗ್ರಾಮ ಕೂಡ ಸೇರಿಕೊಂಡಿದೆ.

ದರಸಗುಪ್ಪೆ ಗ್ರಾಮವು ಒಂದು ಕಾಲದಲ್ಲಿ ದಾಸ ಶ್ರೇಷ್ಠರ ಪವಿತ್ರ ನೆಲೆಬೀಡಾಗಿತ್ತು. ಈಗ ಅವರಿಲ್ಲದಿದ್ದರೂ ಕೂಡ ಭಕ್ತಿ, ಸಂಸ್ಕೃತಿ ಹಾಗೂ ಪರಂಪರೆಗಳು ಹಾಗೆ ನೆಲೆನಿಂತಿವೆ. ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ರಂಗದಲ್ಲೂ ದರಸಗುಪ್ಪೆ ಗ್ರಾಮ ಪ್ರಮುಖ ಕೇಂದ್ರವಾಗಿದೆ.
ದಾಸರು ನೆಲೆಸಿದ್ದ ದರಸಗುಪ್ಪೆ ವೈಶಿಷ್ಟೃ

ಶ್ರೀ ವೈಷ್ಣವ ಪಂಥದ ಸಂತ ಶ್ರೀ ರಾಮನುಜಾಚಾರ್ಯರ ಕಾಲ. ತಮಿಳುನಾಡಿನಿಂದ ವಿಶಿಷ್ಟಾದ್ವೈತ ಸಿದ್ಧಾಂತ ಧರ್ಮ ಪ್ರಚಾರದೊಂದಿಗೆ ಆಗಮಿಸಿದ್ದ ಆಚಾರ್ಯರು ಶ್ರೀರಂಗಪಟ್ಟಣದ ಶ್ರೀರಂಗನಾಥ ಕೆರೆತೊಣ್ಣೂರು ನಂಬಿ ನಾರಾಯಣ, ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಾಲಯ ಸೇರಿದಂತೆ ಈ ಭಾಗದ ವಿವಿಧೆಡೆ ಸಂಚರಿಸಿ ಜನರಿಗೆ ಭಕ್ತಿಯ ಸಾರದೊಂದಿಗೆ ಧರ್ಮೋಪದೇಶಗಳನ್ನು ನೀಡಿದ್ದರು. ಇವರಿಂದ ಪ್ರಭಾವಿತರಾಗಿದ್ದ ಹಲವರು ಶ್ರೀ ವೈಷ್ಣವರಾಗಿ ಆಕಾಲದಲ್ಲಿ ಹಲವು ಕಡೆ ನೆಲೆಸಿದ್ದು, ಅಂತೆಯೇ ತಾಲೂಕಿನಲ್ಲೂ ಸಹ ದಾಸರು ಹೆಚ್ಚಾಗಿ ನೆಲೆಸಿದ್ದ ಗುಪ್ಪೆ(ಗುಂಪು) ದಾಸರಗುಪ್ಪೆ ಎಂದು ಹೆಸರಾಗಿದೆ. ಕಾಲಕ್ರಮೇಣ ಅದು ಜನರ ಬಾಯಿಂದ ಬಾಯಲ್ಲಿ ದರಸಗುಪ್ಪೆಯಾಗಿ ಪರಿವರ್ತನೆಯಾಯಿತು ಎಂಬುದು ಗ್ರಾಮದ ಐತಿಹ್ಯ.

ರಾಜಮುಡಿ-ವೈರಮುಡಿ ಒಳ ಪ್ರವೇಶಿಸುವ ಏಕೈಕ ಗ್ರಾಮ: ಶತಮಾನಗಳ ಹಿಂದೆ ಶ್ರೀರಾಮನ ಪರಮಭಕ್ತ ತುಳಸಿರಾಮ ದಾಸರು ಈ ಗ್ರಾಮದಲ್ಲಿ ನೆಲೆಸಿದ್ದು, ಗ್ರಾಮ ಸೇರಿದಂತೆ ಸುತ್ತಮುತ್ತಲ ಹರಿಕಥೆ ಹೇಳುವಲ್ಲಿ ಸಾಕಷ್ಟು ಪ್ರಸಿದ್ಧಿ ಹೊಂದಿದ್ದರು. ಇಲ್ಲಿನ ಜನರ ಕುಡಿಯುವ ನೀರಿನ ಉಪಯೋಗಕ್ಕೆ ಅವರು ತೆಗೆಸಿದ್ದ ಸಿಹಿನೀರು ಕೊಳ (ಕೀರೆ ತೊಟ್ಟಿ ಭಾವಿ) ಹಾಗೂ ತುಳಸಿಯ ಬೃಂದಾವನ ಇಂದಿಗೂ ಕಾಣಸಿಗಲಿದೆ.

ತುಳಸಿರಾಮದಾಸರು ಹರಿಕಥೆ ಹೇಳಿ ಅಂತ್ಯದಲ್ಲಿ ಮಂಗಳ ಹೇಳುವ ಸಮಯಕ್ಕೆ ಸಾಕ್ಷತ್ ಶ್ರೀಮನ್ ನಾರಾಯಣನೇ ಗರುಡ ರೂಪದಲ್ಲಿ ದರ್ಶನ ನೀಡುತ್ತಿದ್ದ ಎನ್ನಲಾಗಿತ್ತು. ಜನರ ಮಾಹಿತಿಯಿಂದ ಇದನ್ನು ಸ್ವತಃ ಪರೀಕ್ಷಿಸಲು ಮೈಸೂರು ಮಹಾರಾಜರು ತಮ್ಮ ಅರಮನೆಯಲ್ಲಿ ತುಳಸಿರಾಮ ದಾಸರಿಂದ ಹರಿಕಥೆ ವಾಚಿಸಲು ಆಮಂತ್ರಿಸಿ, ಅಂತ್ಯದಲ್ಲಿ ಗರುಡ ಒಳಪ್ರವೇಶಿಸಲು ಅವಕಾಶವಿಲ್ಲದಂತೆ ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿಸಿದ್ದರು.

ಕೊನೆಗೂ ತುಳಸಿರಾಮದಾಸರು ಮಂಗಳ ಹಾಡುವ ವೇಳೆಗೆ ಅರಮನೆಯ ಮುಚ್ಚಿದ ಕಿಟಕಿಯ ಗಾಜು ಒಡೆದು ಗರುಡ ಒಳಪ್ರವೇಶಿಸಿ ದರ್ಶನ ನೀಡಿದ್ದನ್ನು ಸ್ವತಃ ಕಂಡ ಮಹಾರಾಜರು ದಾಸರ ಭಕ್ತಿಗೆ ಶರಣಾಗಿ ಉಡುಗೊರೆ ಕೇಳುವಂತೆ ಕೋರಿದಾಗ ತುಳಸಿರಾಮದಾಸರು ತಾವು ನೆಲೆಸಿರುವ ಗ್ರಾಮದ ದೇವಾಲಯದಲ್ಲಿ ಪ್ರತಿವರ್ಷ ಶ್ರೀ ಚೆಲುವರಾಯಸ್ವಾಮಿ ಉತ್ಸವಕ್ಕೆ ತೊಡಿಸಲು ಕೊಂಡೊಯ್ಯುವ ರಾಜಮುಡಿ ಹಾಗೂ ವೈರಮುಡಿ ಕಿರೀಟಗಳಿಗೆ ಪೂಜೆಗೆ ಅವಕಾಶ ಕಲ್ಪಿಸಲು ಕೋರಿದ್ದು, ಪ್ರತೀತಿಯಂತೆ ಇಂದಿಗೂ ಆ ಸಂಪ್ರದಾಯ ಮುಂದುವರಿದಿರುವುದನ್ನು ಇಲ್ಲಿ ಕಾಣಬಹುದಾಗಿದೆ.

ಗ್ರಾಮಕ್ಕಿದೆ ಗ್ರಾಮ ದೇವತೆ ಶ್ರೀವೀರಾಂಜನೇಯನ ರಕ್ಷಣೆ: ದರಸಗುಪ್ಪೆ ಗ್ರಾಮದ ಶ್ರೀರಕ್ಷಕನಾಗಿ ಶ್ರೀವೀರಾಂಜನೇಯಸ್ವಾಮಿ ಇಲ್ಲಿ ನೆಲೆ ನಿಂತಿದ್ದಾನೆ. ಗ್ರಾಮದಲ್ಲಿ ತುಳಸಿರಾಮದಾಸರ ಕಾಲದಿಂದಲೂ ಈ ದೈವ ಹಲವು ವಿಶೇಷತೆಯ ಪ್ರಭಾವಳಿಗಳನ್ನೊಳಗೊಂಡು ಗ್ರಾಮಸ್ಥರಿಂದ ನಿತ್ಯ ಆರಾಧನೆಯೊಂದಿಗೆ ಪೂಜೆಗೆ ಒಳಪಟ್ಟಿದ್ದಾನೆ. ಏಕಾದಶಿ, ಹನುಮಜಯಂತಿ, ಶ್ರೀರಾಮನವಮಿ ವಿಶೇಷ ಪೂಜೆಗಳು ಜರುಗಲಿದ್ದು, ದಸರೆಯ ನವರಾತ್ರಿ ಸಮಯದಲ್ಲಿ ವಿಜೃಂಭಣೆಯ ಉತ್ಸವಗಳು ಈ ಗ್ರಾಮದಲ್ಲಿ ಜರುಗುತ್ತವೆ. ಇನ್ನು ಶಕ್ತಿದೇವತೆಯಾಗಿ ಗ್ರಾಮ ಹೊರವಲಯದಲ್ಲಿ ಶ್ರೀಬಿಸಿಲು ಮಾರಮ್ಮ ದೇವಿಯನ್ನು ಗ್ರಾಮಸ್ಥರು ಆರಾಧಿಸಿ ನೆಮ್ಮದಿ ಜೀವನ ಕಟ್ಟಿಕೊಂಡಿದ್ದಾರೆ.


ಧಾರ್ಮಿಕ ಸಹಬಾಳ್ವೆಯ ಗ್ರಾಮ: ದರಸಗುಪ್ಪೆ ಗ್ರಾಮದಲ್ಲಿ ಒಕ್ಕಲಿಗ ಸಮುದಾಯದ ಜನರು ಪ್ರಧಾನವಾಗಿ ನೆಲೆಸಿದ್ದಾರೆ. ಇವರೊಂದಿಗೆ ಕುಂಬಾರ, ಮಡಿವಾಳ, ವಿಶ್ವಕರ್ಮ, ಆದಿಕರ್ನಾಟಕ, ನಾಯಕ ಸಮುದಾಯ ಸೇರಿದಂತೆ ಮುಸ್ಲಿಂ ಕುಟುಂಬಗಳು ಕೂಡ ಪರಸ್ಪರ ನೆರವಾಗಿ ಧಾರ್ಮಿಕ ಹಾಗೂ ಸ್ನೇಹದೊಂದಿಗೆ ಭಾವೈಕ್ಯತೆಯ ಸಂತಸದ ಜೀವನ ಕಂಡುಕೊಂಡಿದ್ದಾರೆ. ಗ್ರಾಮದಲ್ಲಿ ಬಹುತೇಕ ರೈತಾಪಿ ಕುಟುಂಬಗಳೇ ನೆಲೆಸಿದ್ದು, ಇಲ್ಲಿ ಕೃಷಿಯೇ ಪ್ರಧಾನವಾಗಿದೆ. ಚಿಕ್ಕದೇವರಾಯ ಸಾಗರ(ಸಿಡಿಎಸ್) ನಾಲೆ ಹಾಗೂ ಕೊಳವೆ ಬಾವಿಗಳಿಂದ ಹೆಚ್ಚು ನೀರಾವರಿ ಪ್ರದೇಶವಾಗಿರುವ ಕಾರಣ ಇಲ್ಲಿ ಭಾಗಶಃ ಕಬ್ಬು, ಭತ್ತ ಹಾಗೂ ತೆಂಗು ಬೆಳೆಗಳನ್ನು ಎಲ್ಲೆಡೆ ಕಾಣಬಹುದಾಗಿದೆ. ಗ್ರಾಮದ ಗಡಿಗೆ ಕೂಗಳತೆ ದೂರದಲ್ಲಿ ಪಾಂಡವಪುರ ಸಕ್ಕರೆ ಕಾರ್ಖಾನೆ ಇದ್ದು, ಇದರಿಂದ ಹಲವರು ಕೃಷಿ ಹಾಗೂ ಶೈಕ್ಷಣಿಕ ಆಧಾರಿತ ಕೆಲಸ ಕಂಡುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net