ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ನಾಲ್ಕೂರು ಗ್ರಾಪಂ ವ್ಯಾಪ್ತಿಯ ಮುದ್ದೂರು ಪೇಟೆಯ ರಸ್ತೆ ಬದಿ ಬೃಹತ್ ದೇವದಾರು ಮರ ಅಪಾಯಕಾರಿ ಸ್ಥಿತಿಯಲ್ಲಿದ್ದು, ಅರಣ್ಯ ಇಲಾಖೆ ತೆರವುಗೊಳಿಸಲು ಮೀನಮೇಷ ಎಣಿಸುತ್ತಿದೆ. ಹಲವು ದಿನಗಳಿಂದ ನಿರಂತರವಾಗಿ ಗಾಳಿ ಮಳೆ ಸುರಿಯುತ್ತಿದ್ದು, ಅಪಾಯಕಾರಿ ಮರಗಳು ಧರೆಗೆ ಉರುಳುವ ಸ್ಥಿತಿಯಲ್ಲಿದೆ.
ತುಂಬಾ ಹಳೆಯದಾದ ದೇವದಾರು ಮರ ಇಂದು ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಹೀಗಾಗಿ ಮಳೆಗಾಲದಲ್ಲಿ ಜೋರಾಗಿ ಬೀಸುವ ಗಾಳಿ ಮಳೆ ನಡುವೆ ಪ್ರಯಾಣಿಕರು ಹಾಗೂ ಸವಾರರು ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ. ಈ ಮರದ ಅಕ್ಕ ಪಕ್ಕದಲ್ಲಿ ಸೊಸೈಟಿ, ಅಂಗಡಿ ಮುಂಗಟ್ಟುಗಳು, ಹೋಟೆಲ್, ವರ್ಕ್ ಶಾಪ್, ವೆಲ್ಡಿಂಗ್ ಶಾಪ್, ಮನೆಗಳಿದ್ದು ಅಪಾಯಕಾರಿ ಮರದ ತೆರವಿಗೆ ಈಗಾಗಲೇ ಸ್ಥಳೀಯರು ಸಂಬ್ಬಂಧಪಟ್ಟ ಇಲಾಖೆಗೆ ಅರ್ಜಿ ಮೂಲಕ ಮಾಹಿತಿ ನೀಡಿದ್ದಾರೆ.
ಈ ರಸ್ತೆಯಲ್ಲಿ ಹೈವೋಲ್ಟೇಜ್ ವಿದ್ಯುತ್ ತಂತಿಗಳು ಕೂಡ ಹಾದು ಹೋಗಿವೆ. ಈ ರಸ್ತೆಯಲ್ಲಿ ಶಾಲಾ ವಾಹನ, ಕೂಲಿ ಕಾರ್ಮಿಕರು, ಬೈಕ್ ಸವಾರರು, ಬಸ್‌ಗಂ ಮೂಲಕ ಸಂಚರಿಸುವವರು ಈ ರಸ್ತೆ ಅವಲಂಬಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಗಾಳಿ ಮಳೆ ಸಂಧರ್ಭ ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಸಂಬಂಧಪಟ್ಟ ಇಲಾಖೆಯನ್ನು ಈ ಮೂಲಕ ಆಗ್ರಹಿಸಿದ್ದಾರೆ.
ಮರ ತೆರವಿಗೆ ಮನವಿ ಬಂದಿದ್ದು, ಸೂಕ್ತ ಕ್ರಮಗಳ ಮೂಲಕ ಮರ ತೆರವುಗೊಳಿಸಲಾಗುವುದು. ಆದೇಶ ಬಂದ ಕೂಡಲೇ ಮರದ ತೆರವು ನಡೆಸಲಾಗುವುದು.
-ಮಂಜು ಗಾಣಿಗ , ಅರಣ್ಯ ಅಧಿಕಾರಿ
ಹೆಬ್ರಿ ವಲಯ ಚೇರ್ಕಾಡಿ ಉಪವಲಯ