

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆಯಿಂದ ಕೂಯ್ಲುಗೆ ಬಂದಿರುವ ಭತ್ತ,ಜೋಳ ಸೇರಿ ಹಲವು ವಾಣಿಜ್ಯ ಬೆಳೆಗಳಿಗೆ ಹಾನಿಯಾಗುತ್ತಿದೆ.
ಮುಂಗಾರಿನ ಅವಧಿಯಲ್ಲಿ ವಾಣಿಜ್ಯ ಬೆಳೆ, ಏಕದಳ, ದ್ವಿದಳ ಧಾನ್ಯ ಮತ್ತು ಎಣ್ಣೆಕಾಳು ಸೇರಿ ವಿವಿಧ ಬೀಜ ಬಿತ್ತನೆ ಮಾಡಲಾಗಿದ್ದು, ಇದೀಗ ಶೇ.75 ಬೆಳೆಗಳು ಕೂಯ್ಲುಗೆ ಬಂದಿವೆ. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಹಿಂಗಾರು ಆರ್ಭಟದಿಂದ ಹಲವು ಬೆಳೆಗಳು ನಾಶವಾಗುತ್ತಿದೆ. ಅಳಿದುಳಿದ ಫಸಲು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.
ರಾಜ್ಯಾದ್ಯಂತ 70 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಮೆಕ್ಕೆಜೋಳ, ಗೋಧಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಧೆ, ಅವರೆ, ಮಟಕಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳಿ, ಹಿಚ್ಚೆಳ್ಳು, ಸೋಯಾ ಅವರೆ, ಅಗಸೆ, ಹತ್ತಿ, ಕಬ್ಬು ಮತ್ತು ತಂಬಾಕು ಸೇರಿ ವಿವಿಧ ಬೀಜ ಬಿತ್ತನೆ ಮಾಡಲಾಗಿತ್ತು. 10.28 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ, ಗೋಧಿ ಸೇರಿ ಏಕದಳ ಧಾನ್ಯ ಬಿತ್ತನೆ ಮಾಡಿದರೆ, 11.48 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ, ಮುಟಕಿ ಸೇರಿ ದ್ವಿದಳ ಧಾನ್ಯ, 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು, ಸಾಸಿವೆ, ಸೋಯಾ ಅವರೆ, ಕುಸುಬೆ, ಅಗಸೆ ಸೇರಿ ಇತರೆ ಎಣ್ಣೆಕಾಳು ಬಿತ್ತನೆ ಮಾಡಲಾಗಿತ್ತು. 8.57 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಹತ್ತಿ, ಕಬ್ಬು, ತಂಬಾಕು ಸೇರಿ ಇತರೆ ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದ್ದು, ಅಕಾಲಿಕ ಮಳೆಯಿಂದ ಬಹುತೇಕ ಬೆಳೆಗಳಿಗೆ ಹಾನಿಯಾಗುತ್ತಿದೆ.
ಅಧಿಕ ಸೈಕ್ಲೋನ್ ಭೀತಿ: ರಾಜ್ಯದಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಅಧಿಕ ಸೈಕ್ಲೋನ್ ಉಂಟಾಗಲಿದ್ದು, ಇದರ ಪರಿಣಾಮದಿಂದ ರೈತರಿಗೆ ಇನ್ನಷ್ಟು ಕಂಟಕವಾಗಲಿದೆ. ಜೂನ್‌ನಲ್ಲಿ ಆರಂಭವಾಗುವ ಮುಂಗಾರು ಮಳೆಯಿಂದಾಗಿ ಬಿತ್ತನೆ ಬೀಜ ಬಿತ್ತುವ ರೈತರು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಸಲಿಗೆ ಬರುವ ಬೆಳಗಳನ್ನು ಕೂಯ್ಲುಗೆ ಸಿದ್ಧತೆ ನಡೆಸುತ್ತಾರೆ. ಆದರೆ, ಈ ಸಂದರ್ಭದಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಸಂಭವಿಸುವ ಸೈಕ್ಲೋನ್‌ನಿಂದ ಶೇ.70 ರಾಗಿ, ಜೋಳ, ಭತ್ತ, ಈರಳ್ಳಿ, ಕಾಫಿ, ಅಡಕೆ, ಕಾಳುಮೆಣಸು, ಬಾಳೆ, ಪಪ್ಪಾಯ, ಆಲೂಗಡ್ಡೆ, ಮೆಣಸಿನಕಾಯಿ, ಹೆಸರು, ಗೋವಿನ ಜೋಳ, ಸೋಯಾಬೀನ್, ತೊಗರಿ, ಅಲಸಂಧೆ, ಶೇಂಗಾ ಹಾಗೂ ಹತ್ತಿ ಸೇರಿ ವಿವಿಧ ಬೆಳೆಗಳು ಸೈಕ್ಲೋನ್‌ನಿಂದಲೇ ಹಾಳಾಗಲಿದೆ.
ಹಿಂಗಾರು ಅವಧಿಯಲ್ಲಿ ಶೇ.40 ಮಳೆ: ಅ.1ರಿಂದ ಡಿಸೆಂಬರ್ 31ರವರೆಗಿನ ಅವಧಿಯನ್ನು ಈಶಾನ್ಯ ಮಾರುತವೆಂದು ಕರೆಯಲಾಗುತ್ತದೆ. ದಕ್ಷಿಣ ಭಾರತ ರಾಜ್ಯಗಳಲ್ಲಿ ಈಶಾನ್ಯ ಮಾರುತ, ಪ್ರಧಾನ ಮಳೆಗಾಲವಾಗಿದೆ. ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತಮಿಳುನಾಡು, ಪಾಂಡಿಚೇರಿಗೆ ಉತ್ತಮ ಮಳೆ ತರಲಿದೆ. ತಮಿಳುನಾಡಿಗೆ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ.48 ಮಳೆ, ಈಶಾನ್ಯ ಮಾರುತದಿಂದ ಬೀಳಲಿದೆ. ಬೆಂಗಳೂರು, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನಲ್ಲಿ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ.30-ಶೇ.40 ಈಶಾನ್ಯ ಮಾರುತದಿಂದ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಒಟ್ಟು ವಾರ್ಷಿಕ ಮಳೆ 1,019 ಮಿಮೀ ಇದ್ದು, ಇದರಲ್ಲಿ 210 ಮಿಮೀ ಮಳೆ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಮಳೆಯಾಗುತ್ತದೆ. ಈ ಬಾರಿ ಹಿಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಈಗಾಗಲೇ ಮುನ್ಸೂಚನೆ ನೀಡಿದೆ.