

ಅಮರಾವತಿ: ಹುಡುಗಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಯುವಕರ ಗುಂಪೊಂದು ಎಸ್ಟಿ ಸಮುದಾಯಕ್ಕೆ ಸೇರಿದ ಯುವಕನನ್ನು ಮನಬಂದಂತೆ ಥಳಿಸಿ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಓಂಗೋಲ್ನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದವರನ್ನು ಮೋಟಾ ನವೀನ್ ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಕಾಶಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾ ಗಾರ್ಗ್ ರಾಮಾಂಜನೇಯುಲು ಹಾಗೂ ಹಲ್ಲೆಗೊಳಗಾದ ನವೀನ್ ಇಬ್ಬರು ಸ್ನೇಹಿತರಾಗಿದ್ದು, ಅಪ್ರಾಪ್ತ ವಯಸ್ಕಳನ್ನು ಪ್ರೀತಿಸುವ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಬಳಿಕ ನವೀನ್ ಅಪ್ರಾಪ್ತ ವಯಸ್ಕಲೊಂದಿಗೆ ಓಡಿ ಹೋಗಿದ್ದ.
ಈ ಸಂಬಂಧ ನವೀನ್ ಜಾಮೀನಿನ ಮೇಲೆ ಹೊರ ಬಂದಿದ್ದ. ಬಳಿಕ ಅಪ್ರಾಪ್ತ ವಯಸ್ಕಳೊಂದಿಗಿನ ಸಂಬಂಧವನ್ನು ಮುಂದುವರೆಸಿದ್ದ. ಇದಿರಂದ ಕುಪಿತಗೊಂಡಿದ್ದ ರಾಮಾಂಜನೇಯುಲು ನವೀನ್ ಜೊತೆ ಜಗಳವಾಡಿ ಇಬ್ಬರು ಮಾತನಾಡುವುದನ್ನು ಬಿಟ್ಟಿದ್ದರು. ಕೆಲ ದಿನಗಳು ಕಳೆದ ನಂತರ ರಾಮಾಂಜನೇಯುಲು ನವೀನ್ಗೆ ಕರೆ ಮಾಡಿ ಮಾತನಾಡಬೇಕು ಎಂದು ಕರೆಸಿಕೊಂಡಿದ್ದಾನೆ.
ಮಾತನಾಡುವ ನೆಪದಲ್ಲಿ ಆರೋಪಿ ಸಂತ್ರಸ್ತನನ್ನು ಕರೆಸಿಕೊಂಡಿದ್ದು, ಇಬ್ಬರು ಚೆನ್ನಾಗಿ ಕುಡಿದಿದ್ದಾರೆ. ಇದಾದ ಕೆಲ ಹೊತ್ತಿನ ಬಳಿಕ ರಾಮಾಂಜನೇಯುಲು ತನ್ನ ಸ್ನೇಹಿತರ ಜತೆಗೂಡಿ ಪಾನಮತ್ತನಾಗಿದ್ದ ನವೀನ್ ಮೇಲೆ ಹಲ್ಲೆ ನಡೆಸಿ ಮೂತ್ರ ವಿಸರ್ಜನೆ ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ತಲೆಮಾರಿಸಿಕೊಂಡಿದ್ದಾರೆ. ಈ ಸಂಬಂಧ ವಿಶೇಷ ತಂಡ ಒಂದನ್ನು ರಚಿಸಲಾಗಿದೆ ಎಂದು ಪ್ರಕಾಶಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾ ಗಾರ್ಗ್ ತಿಳಿಸಿದ್ದಾರೆ.