

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಹೊಸ ಬಿಕ್ಕಟ್ಟು ಶುರುವಾಗಿದ್ದು ಹೈಕಮಾಂಡ್ ವರಿಷ್ಠರಿಗೂ ಹೊಸ ತಲೆನೋವು ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ದಲಿತ ಸಮುದಾಯದ ನಾಯಕರು ಕಣ್ಣನ್ನು ಇಟ್ಟಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನಾನು ಕೂಡ ಆಕಾಂಕ್ಷಿ ಎಂದು ರಮೇಶ್ ಜಿಗಜಿಣಗಿ ಹೆಸರು ತೇಲಿ ಬಿಟ್ಟಿದ್ದಾರೆ. ಲಿಂಗಾಯತ, ಒಕ್ಕಲಿಗ ಸಮುದಾಯದ ಜೊತೆ ಈಗ ದಲಿತ ಸಮುದಾಯದಿಂದಲೂ ಅದೇ ರೀತಿಯಲ್ಲಿ ಭಾರಿ ಲಾಬಿ ನಡೆಯುತ್ತಿದೆ ಎನ್ನಲಾಗುತ್ತಿದೆ.
ವಿ.ಸೋಮಣ್ಣ ಬಹಿರಂಗ ಹೇಳಿಕೆ ಬಳಿಕ ರಮೇಶ್ ಜಿಗಜಿಣಗಿ ಅಧ್ಯಕ್ಷ ಸ್ಥಾನದ ಬಗ್ಗೆ ಒಲವು ತೋರಿಸಿದ್ದಾರೆ. ಡಜನ್ ಗಟ್ಟಲೇ ನಾಯಕರ ಲಾಬಿ ನಡುವೆ ರಮೇಶ್ ಜಿಗಜಿಣಗಿ ಹೆಸರು ಸೇರ್ಪಡೆಯಾಗಿದೆ. ಅವರು “ನಾನು ಕೂಡ ಹಿರಿಯ ನಾಯಕ, ರಾಜ್ಯಾಧ್ಯಕ್ಷ ಹುದ್ದೆಗೆ ನನ್ನನ್ನೂ ಪರಿಗಣಿಸಬೇಕು” ಎಂದಿದ್ದಾರೆ.
ಇತ್ತ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ ಕೂಡ ಅಧ್ಯಕ್ಷ ಸ್ಥಾನ ಪಡೆಯಲು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ದಲಿತ ಸಮುದಾಯದ ಮೂವರು ನಾಯಕರು ರಾಜ್ಯಾಧ್ಯಕ್ಷ ಹುದ್ದೆಗೆ ಕಣ್ಣನ್ನು ಇಟ್ಟಿದ್ದಾರೆ.