

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ನೂತನ ಎಸ್ಪಿ ಡಾ.ಅರುಣ್ ಕೆ. ಶುಕ್ರವಾರ ನಿರ್ಗಮಿತ ಎಸ್ಪಿ ಯತೀಶ್ ಎನ್. ಅವರಿಂದ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಜೊತೆಗೆ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಮತೀಯ ಪ್ರಕರಣ, ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಬಗ್ಗೆಯೂ ಗಂಭೀರವಾಗಿ ಪರಿಗಣಿಸಲಾಗುವುದು. ರೌಡಿ ಶೀಟರ್‌ಗಳ ಚಲನವಲನಗಳ ಮೇಲೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ಮೇಲೆ ನಿಗಾ ಇರಿಸಲಾಗುವುದು. ಅಕ್ರಮ ಗೋಹತ್ಯೆ/ಸಾಗಾಟ, ಮಾದಕ ಪದಾರ್ಥಗಳ ಸಾಗಾಟ/ಮಾರಾಟ/ಸೇವನೆ, ಅಕ್ರಮ ಗಣಿಗಾರಿಕೆ, ಗ್ಯಾಂಬ್ಲಿಂಗ್, ಬೆಟ್ಟಿಂಗ್ ಹಾಗೂ ಇನ್ನಿತರ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಸಾರ್ವಜನಿಕರಲ್ಲಿ ಯಾವುದೇ ಮಾಹಿತಿಗಳಿದ್ದಲ್ಲಿ ನೇರವಾಗಿ ಮುಕ್ತವಾಗಿ ನನ್ನ ಮೊಬೈಲ್ ಸಂಖ್ಯೆ: 9480805301 ಅಥವಾ ಕಛೇರಿಗೆ ಸಂಖ್ಯೆ: 0824-2220503ಗೆ ಮಾಹಿತಿ ನೀಡಬಹುದು ಎಂದು ಡಾ.ಅರುಣ್ ಕೆ. ತಿಳಿಸಿದ್ದಾರೆ.
ಡಾ.ಅರುಣ್ ಕೆ. ಅವರು ಉಡುಪಿ ಎಸ್ಪಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿ, ಜನಮನ್ನಣೆ ಪಡೆದವರು. ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಕರ್ತವ್ಯ ನಿರ್ವಹಿಸುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.