

ಉಳ್ಳಾಲ/ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಗುಡ್ಡ ಕುಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಕ್ಕಳು ಸಹಿತ ಮೂವರು ಮೃತಪಟ್ಟಿದ್ದು, ಅವಶೇಷಗಳಡಿ ಸಿಲುಕಿದ ತಾಯಿ ಮತ್ತು ಮಗು ಇಬ್ಬರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಮಂಜನಾಡಿ ಮಳಿ ಕೊಪ್ಪಳ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಸಮೀಪದ ಗುಡ್ಡೆ ಜರಿದ ಪರಿಣಾಮ ಬುಡದಲ್ಲಿದ್ದ ಕಾಂಕ್ರೀಟು ಮನೆ ಕುಸಿದಿದ್ದು, ಪ್ರೇಮಾ (65) ಮತ್ತು ಸುಮಾರು ಎರಡು ವರ್ಷ ಪ್ರಾಯದ ಒಂದು ಮಗು ಮೃತಪಟ್ಟಿದೆ.
ತಾಯಿ ಮತ್ತು ಮಗು ಇಬ್ಬರು ಕುಸಿದ ಮನೆ ಅಡಿಯಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಅಗ್ನಿಶಾಮಕ ದಳ ಅವರನ್ನು ಒಳಗೊಂಡ ಜಿಲ್ಲಾಡಳಿತದ ತಂಡ ಶ್ರಮಿಸುತ್ತಿದೆ.
ದೇರಳಕಟ್ಟೆ ಸಮೀಪದ ಬೆಳ್ಮ ಕಾನಕೆರೆ ಸಮೀಪ ಇನ್ನೊಂದು ಗುಡ್ಡ ಕುಸಿತ ಪ್ರಕರಣದಲ್ಲಿ 5 ವರ್ಷದ ಬಾಲಕಿ ನಯೀಮ ಮೃತಪಟ್ಟಿದ್ದಾಳೆ. ಉಳ್ಳಾಲ ತಾಲೂಕಿನ 100 ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ.
ಮಂಗಳೂರು ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪ ಮೀನು ಹಿಡಿಯಲು ತೆರಳಿದ ಕಮಲಾಕ್ಷ ಮತ್ತು ಯಶವಂತ್ ನಾಪತ್ತೆಯಾಗಿದ್ದು, ಅವರ ಶೋಧ ಮುಂದುವರಿದಿದೆ.