

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬಿಲ್ಲೂರು ಸುರೇಶ್ ನಿರ್ದೇಶನದ, ಯುವನಟ ದಕ್ಷ ನಾಯಕನಾಗಿ ಡೆಬ್ಯೂ ಮಾಡುತ್ತಿರುವ ಸಿನಿಮಾ ‘ದಕ್ಷ’. ಹೆಸರೇ ಹೇಳುವಂತೆ ಇದು ಕಣ್ಣುಗಳ ಮಹತ್ವ ಸಾರುವ, ನೇತ್ರದಾನದ ಕುರಿತು ಅರಿವು ಮೂಡಿಸುವ ಚಿತ್ರ. ಇತ್ತೀಚೆಗಷ್ಟೆ ರಿಲೀಸ್ ದಿನಾಂಕ ಘೋಷಿಸಿದ ಚಿತ್ರತಂಡ, ನ, 17ರಂದು ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ.
ಪುನೀತ್ ರಾಜಕುಮಾರ್ ನೆನೆದು ಭಾವುಕರಾದ ನಾಯಕ ದಕ್ಷ, ‘ಅಪ್ಪು ಸರ್ ಇದ್ದಿದ್ದರೆ ಖಂಡಿತವಾಗಿಯೂ ನಮಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಆದರೆ, ನಮಗೆ ಆ ಅದೃಷ್ಟವಿಲ್ಲ. ಹೀಗಾಗಿಯೇ ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮಿಸಿ ಬಂದು, ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ’ ಎಂದರು. ನಿರ್ದೇಶಕ ಬಿಲ್ಲೂರು ಸುರೇಶ್, ‘ಸಿನಿಮಾ ಮೇಲಿನ ಅತಿಯಾದ ಪ್ರೀತಿ ಮತ್ತು ಆಸಕ್ತಿಯಿಂದ ಈ ಚಿತ್ರ ಮಾಡಿದ್ದೇವೆ. ಕಣ್ಣುಗಳ ಮಹತ್ವ ಸಾರುವ, ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಕಥೆಯಿರುವ ಸಿನಿಮಾ. ಕುತೂಹಲ ಮೂಡಿಸುತ್ತಾ ಜರ್ನಿಯ ಜತೆ ಸಾಗುವ ಸಿನಿಮಾ. ‘ನೇತ್ರಂ’ ಶೂಟಿಂಗ್ ಬೇಗನೇ ಮುಗಿದಿತ್ತು. ಆದರೆ, ಕರೊನಾದಿಂದಾಗಿ ಸ್ವಲ್ಪ ತಡವಾಗಿದೆ’ ಎಂದು ಮಾಹಿತಿ ನೀಡಿದರು.
ಚಿತ್ರದಲ್ಲಿ ತಲಾ ಮೂರು ಹಾಡುಗಳು ಹಾಗೂ ಸಾಹಸ ಸನ್ನಿವೇಶಗಳಿವೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ಇದೇ ನ. 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.