

ಬೆಳ್ತಂಗಡಿ: ರುಡ್‌ಸೆಟ್ ಸಂಸ್ಥೆಯ ತರಬೇತಿ ಅತ್ಯುತ್ತಮ ಗುಣಮಟ್ಟದಾಗಿದ್ದು, ಸರ್ಕಾರ ಇದನ್ನು ಅಂಗೀಕರಿಸಿದೆ. ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಟ್ಟಾಗ, ತನ್ನಷ್ಟಕ್ಕೆ ಎರೆಹುಳಗಳು ಜಾಸ್ತಿಯಾಗುತ್ತವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಯರಾಜ್ ಕೆ.ಇ ಹೇಳಿದರು.
ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನ ನಡೆದ ಹೈನುಗಾರಿಕೆ ಮತ್ತು ಎರೆಹುಳಗೊಬ್ಬರ ತಯಾರಿಕೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಪೂರ್ವಜರು ಬಿಟ್ಟು ಹೋದ ಈ ಒಳ್ಳೆಯ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಕರ್ತವ್ಯ. ಹೈನುಗಾರಿಕೆಯನ್ನು ಸಾಂಪ್ರದಾಯಿಕವಾಗಿ ಜತೆಗೆ ವೈಜ್ಞಾನಿಕವಾಗಿ ನಡೆಸಿದರೆ ಯಶಸ್ಸು ಗಳಿಸಬಹುದು. ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ಈ ಬೇಡಿಕೆಗೆ ಅನುಗುಣವಾಗಿ ಹಾಲನ್ನು ಪೂರೈಸಲು ನಾವು ಪ್ರಯತ್ನಿಸೋಣ ಎಂದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದರು. ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಸಹಾಯಕಿ ರಶ್ಮಿ ವಂದಿಸಿದರು.