ಬಂಟ್ವಾಳ: ಇಪ್ಪತ್ತೆಂಟು ವಿದ್ಯಾರ್ಥಿಗಳಿಂದ ಮುಚ್ಚುವ ಸ್ಥಿತಿಗೆ ತಲುಪಿ ಬಳಿಕ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ದತ್ತು ಸ್ವೀಕಾರದಿಂದ ಸಮಗ್ರ ಅಭಿವೃದ್ಧಿಯಾಗಿ ರಾಜ್ಯಕ್ಕೆ ಮಾದರಿಯಾದ ದಡ್ಡಲಕಾಡು ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಯ ದತ್ತು ಅವಧಿ ಮುಗಿದಿದ್ದು, ಟ್ರಸ್ಟ್ ಸಲ್ಲಿಸಿದ ಶಾಲಾ ದತ್ತು ನವೀಕರಣ ಅರ್ಜಿಯನ್ನು ಮಾನ್ಯ ಮಾಡದೆ ಶಿಕ್ಷಣ ಇಲಾಖೆ ವಿನಾಕಾರಣ ಮೂಂದೂಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. 1976ರಲ್ಲಿ ಏಕೋಪಾಧ್ಯಯ ಶಿಕ್ಷಕ ಹಾಗೂ ಬೆರಳೆಣಿಕೆಯ ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಳೀಯ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದೆ.
ಕ್ರಮೇಣ ಪಾಲಕರ ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹ, ಆಧುನಿಕ ಕಲಿಕಾ ಸೌಕರ್ಯ, ಮೂಲ ಸೌಲಭ್ಯ ಕೊರತೆಯಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕುಸಿಯುತ್ತಾ ಕೇವಲ 28 ವಿದ್ಯಾರ್ಥಿಗಳಿದ್ದು ಮುಚ್ಚುವ ಹಂತಕ್ಕೆ ತಲುಪಿತ್ತು. ಈ ಸಂದರ್ಭ ಉತ್ಸಾಹಿ ಹಳೇ ವಿದ್ಯಾರ್ಥಿಗಳು ಉದ್ಯಮಿ ಪ್ರಕಾಶ್ ಅಂಚನ್ ನೇತೃತ್ವದಲ್ಲಿ, ಶ್ರೀ ದುರ್ಗಾಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿ ಶಾಲೆಯನ್ನು ಉಳಿಸುವ ಪ್ರಯತ್ನ ನಡೆಸಿದರು. ಇದರ ಪರಿಣಾಮ ಶಾಲೆಗೆ 4 ಕೋಟಿ ರೂ. ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣವಾಯಿತು.
8 ಬಸ್ಗಳು ಬಂದವು. ವಿದ್ಯಾರ್ಥಿಗಳ ಕಲಿಕೆಗೆ ಬೇಕಾಗುವಷ್ಟು ಶಿಕ್ಷಕರನ್ನು ಟ್ರಸ್ಟ್ ನೇಮಿಸಿತು. ಮಾತ್ರವಲ್ಲದೆ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಾಗಿ ಪರಿವರ್ತನೆಯಾಯಿತು. ಪೌಢಶಾಲೆಯೂ ದೊರೆಯಿತು. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾವಿರದ ಗಡಿ ದಾಟಿದ್ದು ದಾಖಲೆಯಾಗಿದೆ. ಈ ಶಾಲೆಗೆ ರಾಜ್ಯಪಾಲರು, ಶಿಕ್ಷಣ ಸಚಿವರು ಸಹಿತ ಕೇಂದ್ರದ ಮಂತ್ರಿಗಳೂ ಭೇಟಿ ನೀಡಿರುವುದು ಇಲ್ಲಿನ ಹೆಗ್ಗಳಿಕೆ. ಪ್ರಸ್ತುತ ಈ ಶಾಲೆ ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಟ್ರಸ್ಟ್ ಈ ಶಾಲೆಯ ಆಮೂಲಾಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವಾಗ ದತ್ತು ನವೀಕರಣಕ್ಕಾಗಿ 2024ರ ಆಗಸ್ಟ್ನಲ್ಲಿ ಟ್ರಸ್ಟ್ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಟ್ರಸ್ಟ್ನ ಪ್ರಸ್ತಾವನೆ ಅಂಗೀಕಾರವಾಗಿಲ್ಲ ಎಂದು ಆರೋಪಿಸಲಾಗಿದೆ.
ಸದನದಲ್ಲಿ ಪ್ರತಿಧ್ವನಿ: ದಡ್ಡಲಕಾಡು ಶಾಲೆಯ ದತ್ತು ಸ್ವೀಕಾರದ ಬಗ್ಗೆ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸಲ್ಲಿಸಿದ ಶಾಲಾ ದತ್ತು ನವೀಕರಣ ಅರ್ಜಿಯನ್ನು ಮಾನ್ಯ ಮಾಡದಿರುವ ಬಗ್ಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಚರ್ಚೆಯಾಗಿದೆ. ಶಾಸಕ ರಾಜೇಶ್ ನೈಾಕ್ ವಿಷಯ ಪ್ರಸ್ತಾಪಿಸಿದ್ದಾರೆ. ವಿಧಾನಪರಿಷತ್ ಸದಸ್ಯ ಭೋಜೇಗೌಡ ಶಾಲೆ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಆಗಿದೆ.