

ಮನಾಲಿ: ಇಬ್ಬರು ಗಂಡು ಮಕ್ಕಳನ್ನು ಹೊಂದುವ ತನ್ನ ಅಭಿಲಾಷೆಯನ್ನು ಈಡೇರಿಸಿಕೊಳ್ಳಲು ಬೆಳಗ್ಗೆಯಷ್ಟೇ ಜನಿಸಿದ್ದ ಹೆಣ್ಣು ಶಿಶುವನ್ನು ಅಪ್ಪನೇ ಕೊಂದಿದ್ದಾನೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ನಸ್ಲೋಹ ಎಂಬ ಗ್ರಾಮದ ನಿವಾಸಿ ಹರೀಶ್ ಕುಮಾರ್ ಎಂಬಾತನ ವಿರುದ್ಧ ಆತನ ಪತ್ನಿ ಮೀನಾ ದೇವಿ (27) ದೂರು ದಾಖಲಿಸಿದ್ದಾರೆ.
8 ವರ್ಷದ ಹಿಂದೆ ಮದುವೆಯಾಗಿದ್ದ ಮೀನಾ ದೇವಿ ಮತ್ತು ಹರೀಶ್ ಕುಮಾರ್ 7 ವರ್ಷದ ಪುತ್ರಿ ಮತ್ತು 4 ವರ್ಷದ ಪುತ್ರ ಇದ್ದಾರೆ. ಮೀನಾ ದೇವಿ ಮೂರನೇ ಬಾರಿಗೆ ಗರ್ಭಿಣಿಯಾದಾಗ ಗಂಡು ಮಗುವಾಗುತ್ತದೆ ಎಂದು ಹರೀಶ್ ನಿರೀಕ್ಷಿಸಿದ್ದ. ತನ್ಮೂಲಕ ಇಬ್ಬರು ಗಂಡು ಮಕ್ಕಳನ್ನು ಹೊಂದುವ ತನ್ನ ಅಭಿಲಾಷೆ ಈಡೇರುವ ಖುಷಿಯಲ್ಲಿದ್ದ.
ಆದರೆ, ಬುಧವಾರ ಬೆಳಗ್ಗೆ ಮೀನಾ ದೇವಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಇದು ಹರೀಶ್ನನ್ನು ಕೆರಳಿಸಿತ್ತು. ಇದರಿಂದ ಬುಧವಾರ ರಾತ್ರಿ ಮಗು ಮತ್ತು ತಾಯಿಯನ್ನು ಮನೆಗೆ ಕರೆತಂದ ಆತ ಪತ್ನಿಯೊಂದಿಗೆ ಜಗಳ ತೆಗೆದಿದ್ದ. ಹಸಿಬಾಣಂತಿ ಎಂಬುದನ್ನೂ ಮರೆತು ಆಕೆಯನ್ನು ಥಳಿಸಿ, ಮಗುವನ್ನು ಕಿತ್ತುಕೊಂಡಿದ್ದ.
ಶಿಶುವನ್ನು ತಲೆಕೆಳಗಾಗಿ ಹಿಡಿದು, ಅದರ ಗಂಟಲೊಳಗೆ ಬೆರಳು ತೂರಿಸಿದ ಆತ, ಮಗುವನ್ನು ಸಾಯಿಸಿದ್ದ. ಬಳಿಕ ಮಗುವಿನ ದೇಹದೊಂದಿಗೆ ಹೊರಹೋಗಿದ್ದ ಆತ ಎಷ್ಟೋ ಹೊತ್ತಾದ ಬಳಿಕ ಮನೆಗೆ ಮರಳಿ, ಶಿಶುವಿನ ಶವವನ್ನು ಸಮಾಧಿ ಮಾಡಿದ್ದಾಗಿ ಹೇಳಿದ್ದ.
ಮಗುವನ್ನು ಎಲ್ಲಿ ಸಮಾಧಿ ಮಾಡಿದೆ, ತೋರಿಸು ಎಂದು ಸಂಬಂಧಿಕರು ಪೀಡಿಸಿದರೂ ಆತ ಅದನ್ನು ತೋರಿಸಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಮೀನಾ ದೇವಿ ಶುಕ್ರವಾರ ಪೊಲೀಸರ ಬಳಿ ಹೋಗಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಮದುವೆಯಾದ ದಿನದಿಂದಲೂ ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲಾಗುತ್ತಿತ್ತು. ಇಬ್ಬರು ಗಂಡು ಮಕ್ಕಳನ್ನು ಹೊಂದುವ ಅಭಿಲಾಷೆಯಲ್ಲಿ ಹೆಣ್ಣುಶಿಶುವನ್ನು ಆತ ಕೊಂದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.