

ಆಗ್ರಾ: ಉತ್ತರ ಪ್ರದೇಶದಲ್ಲಿ ತಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡ ನಂತರದಲ್ಲಿ ಆತನ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆವೊಡ್ಡಿ ಫೇಸ್ಬುಕ್ನಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ತಮ್ಮ ತಂದೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದವರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಶ್ರೇಯಾ ಮತ್ತು ಸಮರ್ಥ್ (ಹೆಸರು ಬದಲಿಸಲಾಗಿದೆ) ಈ ವಿಡಿಯೋವನ್ನು ಹರಿಬಿಟ್ಟಿರುವ ಮಕ್ಕಳಾಗಿದ್ದಾರೆ. ಇವರ ತಾಯಿ 2005ರಲ್ಲಿ ಮೃತಪಟ್ಟಿದ್ದರು. ಆಲಿಗಢದ ಶ್ರೀ ಗಾಂಧಿ ಸ್ಮಾರಕ ಇಂಟರ್ ಕಾಲೇಜ್ನಲ್ಲಿ 4ನೇ ದರ್ಜೆ ಉದ್ಯೋಗಿಯಾಗಿದ್ದ ತಂದೆ ರಾಮ್ (ಹೆಸರು ಬದಲಿಸಲಾಗಿದೆ) ಆರೈಕೆಯಲ್ಲಿ ಮಕ್ಕಳು ಬೆಳೆಯುತ್ತಿದ್ದರು. ಆದರೆ, ದುರದೃಷ್ಟವಶಾತ್, ಆ.3ರಂದು ಈ ಮಕ್ಕಳ ತಂದೆ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾವು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ರಾಮ್, ತಮ್ಮ ಸಂಪೂರ್ಣ ವೇತನ ಬಿಡುಗಡೆ ಮಾಡಲು 2 ಲಕ್ಷ ರೂ. ಲಂಚ ಕೊಡುವಂತೆ ಕಾಲೇಜಿನ ಪ್ರಾಂಶುಪಾಲ ಮತ್ತು ಗುಮಾಸ್ತರು ಬೇಡಿಕೆ ಇಟ್ಟಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಇವರಿಬ್ಬರೂ ಸೇರಿ ರಾಮ್ ಅವರಿಗೆ ಬೇಕೆಂದೇ ಅರ್ಧ ಸಂಬಳ ಕೊಡುತ್ತಿದ್ದರು ಮತ್ತು ಹಾಜರಾತಿ ಹಾಕಲು ಅಡ್ಡಿಪಡಿಸುತ್ತಿದ್ದರು ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಚಿತ್ರೀಕರಿಸಿರುವ ರಾಮ್, ತಾವು ಹೇಗೋ ಕಷ್ಟಪಟ್ಟು ಇಬ್ಬರಿಗೂ 1 ಲಕ್ಷ ರೂ. ಲಂಚ ಕೊಟ್ಟಿದ್ದಾಗಿಯೂ ಉಳಿದ ಹಣಕ್ಕಾಗಿ ಅವರಿಬ್ಬರೂ ಪೀಡಿಸುತ್ತಿರುವುದಾಗಿ ಆರೋಪಿಸಿದ್ದರು. ಅಲ್ಲದೆ, ಇವರಿಬ್ಬರ ಕಿರುಕುಳ ತಡೆಯಲಾರದೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು.
ರಾಮ್ ಆತ್ಮಹತ್ಯೆ ಮಾಡಿಕೊಂಡ ಮರುದಿನ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು. ಆದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಇದರಿಂದ ಬೇಸತ್ತ ಸಹೋದರ ಮತ್ತು ಸಹೋದರಿ ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾರೆ.