

*ಪಿ.ಬಿ.ಹರೀಶ್ ರೈ
ಬಿಜೆಪಿ ಶಾಸಕರು ತಮ್ಮ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯ ಲೀಡ್ ಕಾಯ್ದುಕೊಳ್ಳಲೇ ಬೇಕು..ಇದು ಬಿಜೆಪಿ ಶಾಸಕರಿಗೆ ಪಕ್ಷದ ಹೈಕಮಾಂಡ್ ನೀಡಿದ್ದ ಕಟ್ಟುನಿಟ್ಟಿನ ಆದೇಶ. ಈಗ ದಕ್ಷಿಣ ಕನ್ನಡದ ಬಿಜೆಪಿ ಶಾಸಕರು ಪಕ್ಷದ ಹೈಕಮಾಂಡ್ ನೀಡಿದ ಗುರಿ ಸಾಧಿಸುವಲ್ಲಿ
ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡದ ಬಹುತೇಕ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯ ಲೀಡ್ ಮೀರಿ ಬಿಜೆಪಿ ಮತ ಬಾಚಿಕೊಂಡಿದೆ.
ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ರಾಜ್ಯದ ಬಿಜೆಪಿ ಶಾಸಕರ ಸಭೆ ನಡೆದಿತ್ತು. ಈ ಸಭೆಯಲ್ಲಿ
ಭಾಗವಹಿಸಿದ್ದ ಪಕ್ಷದ ಹಿರಿಯ ನಾಯಕರು ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಸಾಲದು. ತಮ್ಮ ಕ್ಷೇತ್ರದಲ್ಲಿ ಲೀಡ್ ಕಾಯ್ದುಕೊಳ್ಳಲೇ ಬೇಕು ಎಂದು ಶಾಸಕರಿಗೆ ಸೂಚಿಸಿದ್ದರು.
* ನೆಲೆ ಭದ್ರ
ವಿಧಾನಸಭಾ ಕ್ಷೇತ್ರವಾರು ಪಡೆದ ಮತವನ್ನು ಶಾಸಕರ ಸಾಧನೆ ಎಂದು ಪರಿಗಣಿಸಲಾಗುವುದು. ಲೋಕಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿ ಮತ ಕಡಿಮೆಯಾಗದಂತೆ ಶಾಸಕರು ಎಚ್ಚರ ವಹಿಸಬೇಕೆಂದು ತಿಳಿಸಲಾಗಿತ್ತು. ಇದರಿಂದ ದ.ಕ.ಜಿಲ್ಲೆಯ 6 ಬಿಜೆಪಿ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಲೀಡ್ ಕೊಡುವ ಸವಾಲು ಎದುರಾಗಿತ್ತು. ಮೋದಿ ಅಲೆ ಶಾಸಕರಿಗೆ ವರದಾನವಾಗಿ ಪರಿಣಮಿಸಿತು. ಮುನ್ನಡೆ
ಕಾಯ್ದುಕೊಂಡಿರುವ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ನೆಲೆ ಭದ್ರ ಪಡಿಸಿಕೊಂಡಿದ್ದಾರೆ.
*ಉಸ್ತುವಾರಿ ಸಚಿವರಿಗೆ ಹಿನ್ನಡೆ :
ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂದು ಕೆಪಿಸಿಸಿ ಕೂಡಾ ಕಾಂಗ್ರೆಸ್ ಸಚಿವರಿಗೆ ಸೂಚನೆ ನೀಡಿತ್ತು. ಆದರೆ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಕೆಪಿಸಿಸಿ
ಕಾರ್ಯಾಧ್ಯಕ್ಷ ಸಹಿತ ಇಬ್ಬರು ವಿಧಾನ ಪರಿಷತ್ ಸದಸ್ಯರು, ಇಬ್ಬರು ಶಾಸಕರಿದ್ದರೂ ಕಾಂಗ್ರೆಸ್‌ಗೆ ಜಯ ಗಳಿಸುವುದು
ಸಾಧ್ಯವಾಗಿಲ್ಲ. ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸ್ಪೀಕರ್ ಆಗಿರುವ ಕಾರಣ ಚುನಾವಣಾ ಪ್ರಚಾರ
ಮಾಡುವಂತಿರಲಿಲ್ಲ. ಆದರೆ ಅವರ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗಿಂತ 10 ಸಾವಿರ ಹೆಚ್ಚು ಮತ ಕಾಂಗ್ರೆಸ್‌ಗೆ
ದೊರೆತಿದೆ.
*ಲಕ್ಷ ದಾಟಿದ ಮತ :
ಬೆಳ್ತಂಗಡಿ, ಮಂಗಳೂರು ನಗರ ಉತ್ತರ, ಸುಳ್ಯ ಮತ್ತು ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ ಅವರು 1 ಲಕ್ಷಕ್ಕೂ
ಅಧಿಕ ಮತ ಗಳಿಸಿದ್ದಾರೆ. ಪುತ್ತೂರು ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈ 4,153 ಮತಗಳ ಅಂತರದ ಜಯ ಸಾಧಿಸಿದ್ದರು. ಅರುಣ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸಿ 62 ಸಾವಿರ ಮತ ಗಳಿಸಿದ್ದು ಕಾಂಗ್ರೆಸ್‌ಗೆ ವರದಾನವಾಗಿತ್ತು. ಪುತ್ತಿಲ ಈಗ ಬಿಜೆಪಿಗೆ ಮರಳಿದ್ದು ಕ್ಷೇತ್ರದಲ್ಲಿ ಬಿಜೆಪಿ 28,690 ಮತಗಳ ಮುನ್ನಡೆ ಸಾಧಿಸಿದೆ. ಸುಳ್ಯ, ಬೆಳ್ತಂಗಡಿ, ಮೂಡುಬಿದಿರೆ ಮತ್ತು ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಲೀಡ್ ಅಧಿಕವಾಗಿದೆ. ಬಂಟ್ವಾಳ ಕ್ಷೇತ್ರದಲ್ಲಿ 2 ಸಾವಿರ ಮತ್ತು ಮಂಗಳೂರು ಉತ್ತರದಲ್ಲಿ 1 ಸಾವಿರ ಲೀಡ್ ಕಡಿಮೆಯಾಗಿದೆ.
* ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸಲು ಯಶಸ್ವಿಯಾಗಿದ್ದಾರೆ. ಜನತೆ ಮೋದಿ ನಾಯಕತ್ವದ ಮೇಲೆ ವಿಶ್ವಾಸ ಇರಿಸಿದ್ದಾರೆ. ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರ ಪರವಾಗಿ ವ್ಯವಸ್ಥಿತ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸಿದ್ದೆವು. ಇದರಿಂದ ಅಭೂತಪೂರ್ವ ಜಯ ಸಾಧ್ಯವಾಗಿದೆ.
-ಡಿ.ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ
* ಪಕ್ಷದ ಎಲ್ಲ ನಾಯಕರು ಒಗ್ಗಟ್ಟಿನಿಂದ ಪ್ರಚಾರ ಕಾರ್ಯ ನಡೆಸಿದ್ದರು. ಕಾರ್ಯಕರ್ತರು ಕೂಡಾ ಸಾಕಷ್ಟು ಪರಿಶ್ರಮ ವಹಿಸಿದ್ದರು. ಸೋಲಿನ ಬಗ್ಗೆ ಪರಾಮರ್ಶೆ ನಡೆಸುತ್ತೇವೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸುತ್ತೇವೆ.
- ಹರೀಶ್ ಕುಮಾರ್, ಅಧ್ಯಕ್ಷರು, ದ.ಕ.ಜಿಲ್ಲಾ ಕಾಂಗ್ರೆಸ್