ರಾಷ್ಟ್ರಮಟ್ಟದ ಇಂಡಿಯಾ ಕ್ವಿಝ್: ಬೆಂಗಳೂರಿನ ಮಿತ್ರ ಹೆಗಡೆ ವಿನ್ನರ್

dr Sushanth and Mitra hegde
Published on

ಬೆಂಗಳೂರು: ಡಿ.ಕೆ.ಫ್ಲ್ಯಾಗ್ ಫೌಂಡೇಷನ್​ ಪ್ರಾಯೋಜಕತ್ವದಲ್ಲಿ ಸಕ್ಸಸ್ ಫಿಲಂಸ್​ ಇಂಡಿಯಾ ಆಯೋಜಿಸಿದ್ದ ರಾಷ್ಟ್ರಮಟ್ಟದ ಇಂಡಿಯಾ ಕ್ವಿಜ್​ ಫೈನಲ್​ನಲ್ಲಿ ಬೆಂಗಳೂರಿನ ವಿವಿ ಪುರಂ ಜೈನ್ ಕಾಲೇಜಿನ ವಿದ್ಯಾರ್ಥಿ ಮಿತ್ರ ಹೆಗಡೆ ವಿಜೇತರಾಗಿ ಹೊರಹೊಮ್ಮಿದ್ದಾರೆ. ಪ್ರಥಮ ರನ್ನರ್ ಅಪ್​ ಪ್ರಶಸ್ತಿಯನ್ನು ಮಂಗಳೂರಿನ ಕರ್ಸೂರ್ಬಾ ಮೆಡಿಕಲ್ ಕಾಲೇಜಿನ ನೆಫ್ರೋಲಜಿ ವಿಭಾಗದ ಮುಖ್ಯಸ್ಥ ಡಾ. ಸುಶಾಂತ್​ ಮತ್ತು ಗುಜರಾತಿ ನಟಿ ಹಿಮಾಂಗಿನಿ ಹಂಚಿಕೊಂಡಿದ್ದಾರೆ. ಫೈನಲ್​ನಲ್ಲಿ 13 ಸ್ಪರ್ಧಿಗಳಿದ್ದರು.

ಕಳೆದ ಜುಲೈ ನಾಲ್ಕರಿಂದ  ಇಂಡಿಯಾ ಕ್ವಿಝ್ ವಿವಿಧ ಸ್ತರಗಳಲ್ಲಿ ನಡೆದು ಇಂದು ಫೈನಲ್ ಸ್ಪರ್ಧೆ ಆಯೋಜನೆಗೊಂಡಿತ್ತು. ವಿನ್ನರ್​ ಪ್ರಶಸ್ತಿಯು 50,000 ರೂಪಾಯಿ ನಗದು, ಗಿಫ್ಟ್  ಓಚರ್ಸ್ ಹಾಗೂ ಫಲಕವನ್ನು ಒಳಗೊಂಡಿದೆ.   ಪ್ರಥಮ ರನ್ನರ್ ಅಪ್ ಪ್ರಶಸ್ತಿಯು 25,000 ರೂ.ನಗದು ಒಳಗೊಂಡಿದೆ. ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಯನ್ನು  ತಿರುವನಂತಪುರದ ವೈದ್ಯೆ ಡಾII  ದೀಪ್ತಿ ಸ್ಯಾಮ್ಯುಯೆಲ್, ಬಹುರಾಷ್ಟ್ರೀಯ ಕಂಪೆನಿ ಕೆಮ್ ಟ್ರೀಟ್ ಇಂಡಿಯಾ ಲಿಮಿಟೆಡ್ ನ ಮುಖ್ಯಸ್ಥ ಮುಕುಲ್ ಗುಪ್ತಾ ಮತ್ತು ಸುಮಾರು ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ಸೇವೆಸಲ್ಲಿಸಿದ್ದ ಕೆಪಿಎಂ ಜಿ ಯ ಹಿರಿಯ ಪಾಲುದಾರ ನವೀನ್ ಅಗರವಾಲ್ ಹಂಚಿಕೊಂಡಿದ್ದಾರೆ. ಈ ಮೂವರು ತಲಾ ಹದಿನೈದು ಸಾವಿರ ರೂ.ನಗದು ಪಡೆದುಕೊಂಡಿದ್ದಾರೆ.  ವಿಜೇತರು  ನಗದು ಬಹುಮಾನದ ಜತೆಗೆ  ಗಿಫ್ಟ್  ಓಚರ್ಸ್ ಹಾಗೂ ಫಲಕ ಗಳನ್ನು ಪಡೆದುಕೊಂಡಿದ್ದಾರೆ.

ಸ್ವಾತಂತ್ರ್ಯೋತ್ಸವದ ಸಲುವಾಗಿ ಶನಿವಾರ ಸುಮಾರು ಮೂರೂವರೆ ತಾಸುಗಳ ಕಾಲ ನಾಲ್ಕು ಸುತ್ತಿನಲ್ಲಿ ಅತ್ಯಂತ ಕುತೂಹಲಕಾರಿಯಾಗಿ ನಡೆದ ಕ್ವಿಝ್ ಸ್ಫರ್ಧೆಯ ಕೊನೆಯ ತನಕ ಕುತೂಹಲ ಮೂಡಿಸಿತ್ತು. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರ ತನಕ ಮುಕ್ತವಾಗಿ ಆನ್ ಲೈನ್ ನಲ್ಲಿ ನಡೆದ ಈ ಕ್ವಿಝ್ ಕಾರ್ಯಕ್ರಮವನ್ನು ಕನ್ನಡಿಗ ಸುಧೀರ್ ಅತ್ತಾವರ್ ವಿಶಿಷ್ಟವಾಗಿ ವಿನ್ಯಾಸಗೊಳಿಸಿ ಪ್ರಸ್ತುತ ಪಡಿಸಿದ್ದರು.  ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ಮತ್ತು ಬಾಲಿವುಡ್ ನಟಿ ಶರೋನ್ ಪ್ರಭಾಕರ್ ಹಾಗೂ ಡಿ ಕೆ ಫ್ಲ್ಯಾಗ್ ಫೌಂಡೇಷನ್ ನ ಅಧ್ಯಕ್ಷ ಡಾII ರಾಕೇಶ್ ಬಕ್ಷಿ ನಡೆಸಿಕೊಟ್ಟಿದ್ದ ಈ ಕಾರ್ಯಕ್ರಮವನ್ನು, ಸಕ್ಸಸ್ ಫಿಲಂಸ್​ನ ವಿದ್ಯಾಧರ್ ಶೆಟ್ಟಿ ಡಿಜಿಟಲ್ ವಿನ್ಯಾಸಗೊಳಿಸಿದ್ದರು .

ಮುಂಬಯಿಯ ಪ್ರತಿಷ್ಠಿತ ಹಿರಾನಂದಾನಿ ಕಂಪೆನಿಯ ಮುಖ್ಯಸ್ಥ ನಿರಂಜನ್ ಹಿರಾನಂದಾನಿ, ಸೆಲೆಬ್ರಿಟಿ ಡೆಂಟಿಸ್ಟ್ ಮತ್ತು  ಫೆಮಿನಾ ಮಿಸ್ ಇಂಡಿಯಾದ ಸ್ಮೈಲ್ ಡಿಸೈನರ್ ಡಾ. ಸಂದೇಶ್ ಮಾಯೇಕರ್, ಅಲಹಾಬಾದ್ ಹೈ ಕೋರ್ಟ್ ನ ನಿಕಟ ಪೂರ್ವ ನ್ಯಾಯಾಧೀಶ ಜಸ್ಟಿಸ್ ಸುಧೀರ್ ಅಗರವಾಲ್, ಮಾಸ್ಚೋ ಒಲಿಂಪಿಕ್ಸ್ ಹಾಕಿಯ ಚಿನ್ನದ ಪದಕ ವಿಜೇತ ಹಾಕಿ ಆಟಗಾರ ಮೆಲ್ವಿನ್ ಫೆರ್ನಾಂಡಿಸ್, ಲಂಡನ್ ನ ರಾಯಲ್ ಆಸ್ಪತ್ರೆಯ ಹಿರಿಯ ಸರ್ಜನ್ ಡಾ. ಶೈಲೇಶ್, ಬಾಲಿವುಡ್ ನ ಖ್ಯಾತ ಗೀತ ರಚನೆಕಾರ ರವೀಂದ್ರ ರಾವಲ್ ಮೊದಲಾದವರು ಅತಿಥಿಗಳಾಗಿ ಕಾರ್ಯಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net