ರಾಜಾಜಿನಗರ ರಾಮಮಂದಿರ ಮೈದಾನದಲ್ಲಿ ಸಾಂಸ್ಕೃತಿಕ, ಆಧ್ಯಾತ್ಮಿಕ ಉತ್ಸವ; ಶ್ರೀನಿವಾಸ ಕಲ್ಯಾಣೋತ್ಸವ

rajaji
Published on

ಬೆಂಗಳೂರು: 4 ಎಕ್ಸ್ ಮೀಡಿಯಾ ಮತ್ತು ಸ್ಪಾರ್ಕ್ ಈವೆಂಟ್ ಸಹಯೋಗದಲ್ಲಿ ಆಯೋಜಿಸಿರುವ ರಾಜಾಜಿನಗರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಉತ್ಸವ -2025ಕ್ಕೆ ಚಾಲನೆ ದೊರೆತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜಾಜಿನಗರದ ರಾಮಮಂದಿರ ಆಟದ ಮೈದಾನದಲ್ಲಿ ಶುಕ್ರವಾರ ಆರಂಭವಾಗಿರುವ ಉತ್ಸವವು ಶನಿವಾರ ಮತ್ತು ಭಾನುವಾರ ಮುಂದುವರೆಯಲಿದೆ. ವಿಶೇಷವಾಗಿ ಇಂದು (ಶನಿವಾರ) ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.

ಸಂಜೆ 5 ಗಂಟೆಯಿಂದ ಆರಂಭವಾಗಲಿರುವ ಶ್ರೀನಿವಾಸ ಕಲ್ಯಾಣೋತ್ಸವವು ಕಲರ್ಸ್‌ ಕನ್ನಡ ವಾಹಿನಿಯ ಮಹರ್ಷಿ ದರ್ಶನ ಕಾರ್ಯಕ್ರಮದ ಖ್ಯಾತಿಯ ಶ್ರೀಶಂಕರಾನಂದ ಸರಸ್ವತಿ ಗುರೂಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಟಿಟಿಡಿಯ ದಾಸಸಾಹಿತ್ಯ ಪ್ರಸಾರ ವಿಭಾಗದ ಸಂಚಾಲಕರಾದ ವಾದಿರಾಜ ತಾಯಲೂರು ಅವರು ಶ್ರೀನಿವಾಸ ಕಲ್ಯಾಣೋತ್ಸವದ ಪ್ರಕ್ರಿಯೆಗಳನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕಲ್ಯಾಣೋತ್ಸವದ ನಂತರ ಪ್ರಸಾದ ವಿನಿಯೋಗ ಇರಲಿದೆ.

ಭಾನುವಾರ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ರಾಜಾಜಿನಗರ ಕ್ಷೇತ್ರದ ಸ್ಥಳೀಯ ಪ್ರತಿಭೆಗಳಿಗೆ ಸಾಂಸ್ಕೃತಿಕ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಸಂಗೀತ, ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಗಮನ ಸೆಳೆಯುತ್ತಿರುವ ಪ್ರದರ್ಶನ ಮತ್ತು ಮಾರಾಟ

ಮೂರು ದಿನಗಳ ರಾಜಾಜಿನಗರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಉತ್ಸವದಲ್ಲಿ ತೆರೆಯಲಾಗಿರುವ ವಿವಿಧ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಬಟ್ಟೆ, ಅಲಂಕಾರಿಕ ವಸ್ತುಗಳು, ಪುಸ್ತಕ, ಔಷಧಿ, ದಿನಬಳಕೆಯ ವಸ್ತುಗಳ ಮಳಿಗೆಗಳು ಜನರನ್ನು ಆಕರ್ಷಿಸುತ್ತಿವೆ. ರಾಜ್ಯ ಹಾಗೂ ಹೊರರಾಜ್ಯಗಳ ವ್ಯಾಪಾರಸ್ಥರು ವಿಶೇಷ ವಸ್ತುಗಳೊಂದಿಗೆ ಮಳಿಗೆಗಳನ್ನು ತೆರೆದಿದ್ದು, ಜನ ಖರೀದಿಗಾಗಿ ಮುಗಿ ಬೀಳುತ್ತಿದ್ದಾರೆ. ಉತ್ಸವದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿರುವ ಆಹಾರ ಮೇಳ ತಿಂಡಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಬಿಸಿ ಬಿಸಿ ಬಜ್ಜಿ, ಬೋಂಡಾ. ವೆಜ್ ಗ್ರಿಲ್, ಮಂಚೂರಿ, ಪಾನಿಪೂರಿ, ಚುರುಮುರಿ, ಉತ್ತರ ಕರ್ನಾಟಕದ ಸ್ಪಷಲ್ ಕರದಂಟು, ಬಗೆ ಬಗೆಯ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ವೆರೈಟಿ ತಾಂಬೂಲಗಳು ಹಾಗೂ ಉತ್ತರ ಭಾರತದ ಹಲವು ಆಕರ್ಷಕ ಸಿಹಿ ತಿಂಡಿಗಳು ಮೇಳದಲ್ಲಿವೆ.

"ಲೋಕ ಕಲ್ಯಾಣದ ಉದ್ದೇಶದಿಂದ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಲಾಗಿದೆ. ರಾಜಾಜಿನಗರ ಮಾತ್ರವಲ್ಲದೆ ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಹಾಗೂ ರಿಯಾಯಿತಿ ದರದಲ್ಲಿ ಹಲವು ವಸ್ತುಗಳ ಮಾರಾಟ ಮಳಿಗೆಗಳನ್ನು ಉತ್ಸವಲದಲ್ಲಿ ತೆರೆಯಲಾಗಿದೆ. ಜನರು ಅದರ ಪ್ರಯೋಜನ ಪಡೆದುಕೊಳ್ಳಬಹುದು.” -ನಿತ್ಯಾನಂದ, ಆಯೋಜಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net