ಕಲೆ ನೋಡುವ ಸಂವೇದನಾ ದೃಷ್ಟಿ ಬೆಳೆಸಿಕೊಳ್ಳಿ

Cultivate the sensory vision of seeing art
ಬಾಗಲಕೋಟೆ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಚಿತ್ರಕಲಾ ಪ್ರದರ್ಶನಕ್ಕೆ ಪಿಡಬ್ಲುೃಡಿ ನಿವೃತ್ತ ಕಾರ್ಯದರ್ಶಿ ಡಾ.ಜಿ.ಸಿ.ತಲ್ಲೂರ ಉದ್ಘಾಟಿಸಿದರು. ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ.ಕೆ.ಹೀರೆಮಠ, ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಪಿ.ಎಸ್ ಕಡೇಮನಿ, ವಿದ್ಯಾಧರ ಸಾಲಿ, ವಿ.ಆರ್.ಶಿರೋಳ ಇತರರು ಇದ್ದರು.
Published on

ಬಾಗಲಕೋಟೆ: ಚಿತ್ರಕಲಾ ಪ್ರಾತ್ಯಕ್ಷಿಕೆಗಳು ಜೀವನ ಸಂದೇಶ ಸಾರುತ್ತವೆ. ಪ್ರದರ್ಶನಗಳು ಕಲಾಕಾರರಿಗೆ ಗೌರವ ಸಮರ್ಪಣಾ ಸಂಕೇತಗಳಾಗಿದ್ದು, ಮುಂದಿನ ಪೀಳಿಗೆಗೆ ಪ್ರೇರಕ ಶಕ್ತಿಯಾಗುತ್ತವೆ ಎಂದು ಪಿಡಬ್ಲುೃಡಿ ನಿವೃತ್ತ ಕಾರ್ಯದರ್ಶಿ ಡಾ.ಜಿ.ಸಿ.ತಲ್ಲೂರ ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ವಿಜಯಪುರದ ಸೋಮಶೇಖರ ಸಾಲಿ ಪ್ರತಿಷ್ಠಾನ ವತಿಯಿಂದ ಸೋಮಶೇಖರ ಸಾಲಿ ಜನ್ಮ ಶತಮಾನೋತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರೃ ಪೂರ್ವದಲ್ಲಿ ಆಡಳಿತ ಕೇಂದ್ರದಿಂದ ದೂರವಿದ್ದ ಬಾಗಲಕೋಟೆಯಂತಹ ಪ್ರದೇಶಕ್ಕೆ ಗೌರವ ತಂದು ಕೊಟ್ಟವರು ಸೋಮಶೇಖರ ಸಾಲಿ.

ಧೀಜಿ ಪ್ರಭಾವಕ್ಕೆ ಒಳಗಾದ ಅವರು ಉಪಜೀವನಕ್ಕೆ ವ್ಯಾಪಾರ ವೃತ್ತಿಯಲ್ಲಿದ್ದರೂ ಚಿತ್ರಕಲೆಯನ್ನು ಜೀವನ ವೃತ್ತಿಯನ್ನಾಗಿಸಿಕೊಂಡವರು ಎಂದರು.
ಕಲೆ, ಸಾಹಿತ್ಯ ಕ್ಷೇತ್ರ ಉಪ ಜೀವನವಾಗಬಾರದು.

ಅಂತರಾತ್ಮದಲ್ಲಿ ಹುದುಗಿರುವ ಪ್ರಬಲ ಶಕ್ತಿಗಳಾಗಿದ್ದು, ಸಂಸ್ಕೃತಿ ಮತ್ತು ಸಂಪತ್ತು ಎಂದಿಗೂ ಒಂದೇ ಕಡೆ ಇರುವುದಿಲ್ಲ. ಆದರೆ ಸಾಲಿ ಅವರಲ್ಲಿ ಇವೆರಡು ನೆಲೆಯೂರಿದ್ದವು. ವಿದ್ಯಾರ್ಥಿಗಳಿಗೆ ಇಂತಹ ಸಾಧಕರ ಪರಿಚಯ ಮಾಡುವ ಅವಶ್ಯಕತೆಯಿದೆ.

ಯಾರು ಇತಿಹಾಸ ಅರಿಯುವುದಿಲ್ಲವೋ ಅವರು ನಾಗರಿಕರಾಗಲು ಸಾಧ್ಯವಿಲ್ಲ. ಸೋಮಶೇಖರ ಅವರು ಕಲೆಯನ್ನೇ ಜೀವನವಾಗಿಸಿಕೊಂಡು ಬಂದು ಕಲಾತ್ಮಕವಾಗಿಯೇ ಬದುಕಿದ ವ್ಯಕ್ತಿಯಾಗಿದ್ದಾರೆ. ಕಲೆಯನ್ನು ನೋಡುವ ಸಂವೇದನಾ ದೃಷ್ಟಿಯನ್ನು ಬೆಳೆಸಿಕೊಳ್ಳಿ ಅಂದಾಗ ಮಾತ್ರ ಅದರ ಮೌಲ್ಯವನ್ನು ಅರಿಯಲು ಸಾಧ್ಯ ಎಂದು ತಿಳಿಸಿದರು.

ಇದನ್ನೂ ಓದಿ: ಮಹಾಪುರುಷರ ಜಯಂತಿ ಅರ್ಥಪೂರ್ಣ ಆಚರಣೆ

ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ.ಕೆ.ಹೀರೆಮಠ ಮಾತನಾಡಿ, ಸೋಮಶೇಖರ ಸಾಲಿ ಅವರು ಅಪರೂಪದ ಸಾಧಕರಾಗಿದ್ದು, ಪ್ರತಿಷ್ಠಾನದ ಮೂಲಕ ಅವರ ಕಲಾಕೃತಿಗಳನ್ನು ಜನರಮನಗಳಿಗೆ ಮುಟ್ಟಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆ. ಅವರ ವ್ಯಕ್ತಿತ್ವವನ್ನು ಅವರ ಕಲಾಕೃತಿಗಳು ವರ್ಣಿಸುತ್ತವೆ. ಹತ್ತಿ ವ್ಯಾಪಾರಸ್ಥರಾಗಿದ್ದರೂ ಭಾರತೀಯ ಮತ್ತು ಪಾಶ್ಚಾತ್ಯ ಕಲೆಯನ್ನು ಅಧ್ಯಯನ ಮಾಡಿದ ಅವರು ತಮ್ಮ ಚಿತ್ರಕಲೆ ಮೂಲಕ ತೋರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಾವಿದರು ಕುಟುಂಬ ಹಾಗೂ ಸಮಾಜದೊಂದಿಗೆ ಹೋರಾಡಬೇಕು. ಇದರಲ್ಲಿ ಗೆದ್ದರೆ ಮಾತ್ರ ನಿಜವಾದ ಕಲಾವಿದನಾಗುತ್ತಾನೆ. ಅಂತಹ ಮಹತ್ವ ಕಾರ್ಯವನ್ನು ಅತ್ಯಂತ ನಿಷ್ಠೆಯಿಂದ ಮಾಡಿದ ಹೆಗ್ಗಳಿಕೆ ಸಾಲಿಯವರಿಗೆ ಸೇರುತ್ತದೆ ಎಂದು ಹೇಳಿದರು.

ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಮಾತನಾಡಿ, ಗಾಂಧಿವಾದಿಯಾದ ಸೋಮಶೇಖರ ಅವರು ತಮ್ಮ ಚಿತ್ರಕಲೆ ಮೂಲಕ ಇಂದಿಗೂ ಜೀವಿಸುತ್ತಿದ್ದಾರೆ ಎಂದರು.

ಸೋಮಶೇಖರ ಸಾಲಿ ಪ್ರತಿಷ್ಠಾನದ ಅಧ್ಯಕ್ಷ ಪಿ.ಎಸ್ ಕಡೇಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಪುರದ ಸೋಮಶೇಖರ ಸಾಲಿ ಜನ್ಮ ಶತಮಾನೋತ್ಸವದ ಸಮಿತಿ ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಸಾಲಿ, ಬಿವಿವಿ ಸಂಘದ ಆಡಳಿತಾಧಿಕಾರಿ ವಿ.ಆರ್.ಶಿರೋಳ, ಬಿಡದಿಯ ಉನ್ನತ ಶಿಕ್ಷಣ ನಿರ್ದೇಶಕ ಡಾ.ವಿ.ಎಸ್.ಕಟಗಿಹಳ್ಳಿಮಠ, ಬಿವಿವಿ ಸಂಘದ ಸದಸ್ಯರಾದ ಎಸ್.ಆರ್ ಮನಹಳ್ಳಿ, ಪ್ರಾಚಾರ್ಯ ಎಸ್.ಆರ್.ಮೂಗನೂರಮಠ, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಎರಡು ದಿನ ಚಿತ್ರಕಲಾ ಪ್ರದರ್ಶನ: ಸೋಮಶೇಖರ ಸಾಲಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಡಿ.28ರವರೆಗೆ ಚಿತ್ರಕಲಾ ಪ್ರದರ್ಶನವನ್ನು ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದು, ನಿವೃತ್ತ ಪಿಡಬ್ಲುೃಡಿ ಕಾರ್ಯದರ್ಶಿ ಜಿ.ಸಿ ತಲ್ಲೂರ ಉದ್ಘಾಟಿಸಿದರು. ಸೋಮಶೇಖರ ಸಾಲಿಯವರ ಕುಂಚದಿಂದ ಮತ್ತು ಪೆನ್ಸಿಲ್‌ನಿಂದ ರಚಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು, ಪ್ರಕೃತಿ, ಮಹಿಳೆಯರ ಚಿತ್ರಗಳು ಗಮನ ಸೆಳೆದವು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net