

ಬೆಂಗಳೂರು: ತಮಿಳುನಾಡನ್ನು ಹೊಗಳಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಮಿಳು ಭಾಷೆಯಲ್ಲೇ ಟ್ವೀಟ್ ಮಾಡಿರುವ ಸಿ.ಟಿ.ರವಿ, 'ಸದ್ಗುಣದ ಹಾದಿಯಲ್ಲಿ ನಿಂತ ರಾಜರು, ಸತ್ಯ ಹುಡುಕಿದ ಋಷಿಮುನಿಗಳು, ತಮಿಳು ಸಂಗಮದ ಸಾಕ್ಷಿಗಳು ಮತ್ತು ಸದಾ ಒಳ್ಳೆಯದಕ್ಕೆ ನಿಲ್ಲುವ ಜನರ ಸಂಗಮಕ್ಕೆ ಸಾಕ್ಷಿಯಾಗಿದೆ ತಮಿಳುನಾಡಿನ ನೆಲ. ಇಂತಹ ಉತ್ತಮ ಮತ್ತು ಪ್ರಸಿದ್ಧ ಭೂಮಿ ಒಳ್ಳೆಯದನ್ನು ಬೆಂಬಲಿಸುವ ಜನರೊಂದಿಗೆ ದೀರ್ಘಕಾಲ ಬದುಕಬೇಕು. ನಿಮ್ಮೆರೆಲ್ಲರಿಗೂ ನನ್ನ ಅಭಿನಂದನೆಗಳು' ಎಂದು ಬರೆದುಕೊಂಡಿದ್ದಾರೆ.
ತಮಿಳು ಮಾತ್ರವಲ್ಲ, ಇಂಗ್ಲಿಷ್ನಲ್ಲೂ ಟ್ವೀಟ್ ಮಾಡಿರುವ ಸಿ.ಟಿ.ರವಿ, 'ಯಾವಾಗಲೂ ಧರ್ಮಕ್ಕಾಗಿ ನಿಂತ ಜನರು, ಆಧ್ಯಾತ್ಮಿಕತೆಯಲ್ಲಿ ಹೆಚ್ಚಿನ ಸಾಧ್ಯತೆಗಳನ್ನು ಹುಡುಕುವ ಭೂಮಿ, ಪ್ರಾಚೀನ ಕಾಲದಲ್ಲಿ ಸಂಘದ ಸುತ್ತಲೂ ನಿರ್ಮಿಸಲ್ಪಟ್ಟ ಮತ್ತು ಒಟ್ಟುಗೂಡಿಸಲ್ಪಟ್ಟ ಅತ್ಯಂತ ಪ್ರಾಚೀನ ಸಂಸ್ಕೃತಿ, ಮುಖ್ಯವಾಗಿ ಸದಾಚಾರದ ಹಾದಿಯಲ್ಲಿ ಯಾವಾಗಲೂ ನಿಲ್ಲುವ ಅತ್ಯಂತ ಪ್ರಬಲ ಜನರಿಗೆ ನನ್ನ ಅಭಿನಂದನೆಗಳು' ಎಂದಿದ್ದಾರೆ.
ಸಿ.ಟಿ.ರವಿಯ ತಮಿಳು ಟ್ವೀಟ್ಗೆ ಗರಂ ಆಗಿರುವ ಕನ್ನಡಿಗರು ಕಮೆಂಟ್ಸ್ ಮೂಲಕವೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. 'ಕನ್ನಡ ನಾಡಿನಲ್ಲಿ ಹುಟ್ಟಿ, ಬೆಳೆದವರು ತಮಿಳು ಭಾಷಾಭಿಮಾನದ ಮೇಲೆ ಪ್ರೀತಿ ತೋರಿಸ್ತಾ ಅವರ ಭಾಷೆಯಲ್ಲಿ ಆ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವುದು ವಿಪರ್ಯಾಸ... ಎಂದು ಬಸವರಾಜು ಎಂಬುವವರು ಅಸಮಾಧಾನ ಹೊರಹಾಕಿದ್ದಾರೆ. ಮಂಡ್ಯ ಮಂಜು ಎಂಬಾತ 'ಬಕೆಟ್ ಹಿಡಿಬೇಕು ಈ ರೀತಿನಾ' ಎಂದಿದ್ದಾರೆ. 'ಅಗಸ ಹೊಸದರಲ್ಲಿ ಬಟ್ಟೆಗಳನ್ನು ಎತ್ತಿ ಎತ್ತಿ ಒಗೆದನಂತೆ!' ಎಂದು ಪ್ರಶಾಂತ್ ಕುಮಾರ್ ಟೀಕಿಸಿದ್ದಾರೆ.
'ಇವರು ಕನ್ನಡಿಗರಿಂದ ಮಂತ್ರಿ ಆದವರು ತಾನೆ...' ಎಂದಿರುವ ವಿಜಯ್ ಗೌಡ್ರು, 'ಅನುಮಾನ ಅಷ್ಟೇ! ಪರಿಹರಿಸಿ' ಎಂದು ಕಮೆಂಟ್ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮದ ಬ್ಯಾನರ್ವೊಂದನ್ನು ಪೋಸ್ಟ್ ಮಾಡಿರುವ ಕೆ.ಶ್ರೀನಿಧಿ ಎಂಬುವವರು, 'ಇದು ಏನು ಸ್ವಾಮಿ? ಯಾವ ಭಾಷೆ ಇದು? ನೀವೆಲ್ಲ ಕನ್ನಡದವರಾ? ಕೆಳಗೆ ನೋಡಿ ಒಂದು ಅಕ್ಷರವಾದರೂ ಬೇರೆ ಭಾಷೆ ಇದೆಯಾ? ಅವರಿಗೆ ಅಷ್ಟು ಅಭಿಮಾನ ಇರಬೇಕಾದರೆ ನಿಮಗೆ ಯಾಕೆ ಇಲ್ಲ. ನೀವೆಲ್ಲ ನಿಜವಾಗಿಯೂ ಕನ್ನಡದವರೇನಾ? ಉದ್ಧಾರವಾಯಿತು ನಮ್ಮ ಕನ್ನಡ. ನಿಜವಾಗಲೂ ಬಿಜೆಪಿಗೆ ವೋಟ್ ಹಾಕಬೇಕು?' ಎಂದು ಪ್ರಶ್ನೆಗಳಲ್ಲೇ ಸಿ.ಟಿ.ರವಿಗೆ ಚಾಟಿ ಬೀಸಿದ್ದಾರೆ.
'ಭಾರತದ ಯಾವುದೇ ರಾಜ್ಯವಿರಲಿ ನನ್ನ ಕನ್ನಡ ಭಾಷೆಗೆ ಮರ್ಯಾದೆ ಕೊಡದವರಿಗೆ ನಾನೆಂದೂ ಮರ್ಯಾದೆ ಕೊಡುವುದಿಲ್ಲ' ಎಂದು ಅನಿಲ್ ಮಲ್ನಾಡ್ ಪ್ರತಿಕ್ರಿಯಿಸಿದ್ದಾರೆ. ಹೀಗೆ ಹಲವರು ಸಿ.ಟಿ.ರವಿ ಮಾಡಿದ್ದ ತಮಿಳು ಟ್ವೀಟ್ಗೆ ಕಿಡಿಕಾರಿದ್ದಾರೆ.
ಇತ್ತೀಚಿಗೆ ಕೇಂದ್ರ ಸರ್ಕಾರ ಸಂಸತ್ನಗಲ್ಲಿ ಅಂಗೀಕರಿಸಿರುವ ಕೃಷಿ ಮಸೂದೆಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿ.ಟಿ.ರವಿ ಪಾಲ್ಗೊಂಡಿದ್ದರು. ಬಳಿಕ ಸಿ.ಟಿ.ರವಿ ಅಲ್ಲಿನ ಸಂಸ್ಕೃತಿಯನ್ನು ಹೊಗಳುತ್ತಾ ತಮಿಳು ಭಾಷೆಯಲ್ಲೇ ಟ್ವೀಟ್ ಮಾಡಿದ್ದರು.