

ಬೆಳಗಾವಿ: 2025-26ನೇ ಸಾಲಿನ ಆಯವ್ಯಯವನ್ನು ಮಂಡಿಸುವ ಮೂಲಕ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಸಿಎಂ ಎಂಬ ಹೆಗ್ಗಳಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಈ ಸಾಲಿನ ಬಜೆಟ್ ಅನ್ನು ಕಾಂಗ್ರೆಸ್ ನಾಯಕರು ಹಾಡಿಹೊಗಳುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಕುರಿತು ಪರಿಷತ್ ಸದಸ್ಯ ಸಿ.ಟಿ ರವಿ( C T Ravi) ಲೇವಡಿ ಮಾಡಿದ್ದಾರೆ.
ಸಿಎಂ, ಡಿಸಿಎಂ ಹಣಕಾಸು ಸಚಿವರಾಗಿ ಸಿದ್ದರಾಮಯ್ಯರದ್ದು ಇದು 16 ಬಜೆಟ್. ಸಿದ್ದರಾಮಯ್ಯನವರೇ ಹೇಳಿದಂತೆ ಇದು ದಾಖಲೆಯ ಬಜೆಟ್ ಮಂಡನೆ ನಿಜ. ಏಕೆಂದರೆ ಅತಿಹೆಚ್ಚು ಸಾಲ ಮಾಡಿದ ಕೀರ್ತಿಯೂ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ. ಜನರಿಗೆ ಗೊತ್ತಾಗಬೇಕಾದ ದಾಖಲೆ ಅಂದ್ರೆ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಇವರು. ಈವರೆಗೂ ಎಷ್ಟು ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಸಾಲ ಮಾಡಿದ್ದಾರೆ ಅದಕ್ಕಿಂತ ಹೆಚ್ಚು ಸಿದ್ದರಾಮಯ್ಯ ಒಬ್ಬರೆ ಸಾಲ ಮಾಡಿದ್ದಾರೆ. 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಾಲ ಮಾಡಿದ್ದಾರೆ ಎಂದು ಸಿ.ಟಿ. ರವಿ ಟೀಕಿಸಿದ್ದಾರೆ..
ಕಳೆದ ಬಾರಿ ಬಜೆಟ್‌ಗಿಂದ 9,600 ಕೋಟಿ ರೂಪಾಯಿ ತೆರಿಗೆ ಸಂಗ್ರಹ ಕಡಿಮೆ ಆಗುತ್ತದೆ ಅಂತಾ ಅಂದಾಜು ಮಾಡಿದ್ದಾರೆ. ಬೆಲೆ ಏರಿಕೆ ನಂತರವೂ ತೆರಿಗೆ ಸಂಗ್ರಹ ಕಡಿಮೆ ಅಂದರೆ ಗಂಭೀರವಾಗಿ ಯೋಚನೆ ಮಾಡಬೇಕು. ನೀವು ಇದುವರೆಗೂ ಕಳೆದ ಬಜೆಟ್‌ನಲ್ಲಿ ಘೋಷಣೆ ಆದ ಪ್ರತಿಶತ 55 ಪರ್ಸೆಂಟ್ ಖರ್ಚು ಮಾಡಿದ್ದಾರೆ, ಇನ್ನೊಂದು ತಿಂಗಳಲ್ಲಿ 45 ಪರ್ಸೆಂಟ್ ಹೆಚ್ಚು ಖರ್ಚು ಮಾಡಲು ಸಾಧ್ಯವಾ? ಎಂದು ಪ್ರಶ್ನಿಸಿದ್ದಾರೆ.
ಆಸ್ತಿ ನೋಂದಣಿ, ಸರ್ಕಾರಿ ಆಸ್ಪತ್ರೆ, ಕಾಲೇಜು ಫೀ, ವಿದ್ಯುತ್ ದರ, ಮೆಟ್ರೋ ದರ, ನೀರಿನ ಸುಂಕ, ಆಸ್ತಿ ತೆರಿಗೆ, ಬಿತ್ತನೆ ಬೀಜದ ಬೆಲೆ, ಬಿಯರ್ ಬೆಲೆ, ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಅಲ್ಲದೆ ಪೆಟ್ರೋಲ್, ಡೀಸೆಲ್ ಮೇಲೆ ಮೂರು ರೂಪಾಯಿ ಸೆಸ್ ಹೆಚ್ಚಿಸಿದ್ರು. ಇಷ್ಟಾದ ಮೇಲೂ 9 ಸಾವಿರ ಕೋಟಿ ತೆರಿಗೆ ಸಂಗ್ರಹ ಕಡಿಮೆ ಎಂದು ಅಂದಾಜು ಮಾಡಿದ್ದಾರೆ. ಸಾಲ ಮಾಡಿ ತುಪ್ಪ ತಿನ್ನು ಅಂತಾರೆ, ಸಾಲ ಮಾಡಿದ್ದೀರಿ ತುಪ್ಪ ಯಾರು ತಿಂತಿದ್ದಾರೆ? ಎರಡೂವರೆ ಲಕ್ಷ ಕೋಟಿಗೂ ಹೆಚ್ಚು ಭದ್ರತಾ ವೆಚ್ಚ ಹೆಚ್ಚಾಗಿದೆ ಇದನ್ನ ಯಾವ ಆರ್ಥಿಕ ತಜ್ಞರು ಸಮರ್ಥನೆ ಮಾಡಕ್ಕಾಗುತ್ತೆ ಎಂದು ಕೇಳಿದ್ದಾರೆ.
ಇದು ಕಾಂಗ್ರೆಸ್ ಬಜೆಟ್ ಅಥವಾ ಮುಸ್ಲಿಂ ಲೀಗ್ ಬಜೆಟ್ಟೋ? ಎಂದು ಲೇವಡಿ ಮಾಡಿದ್ದಾರೆ. ಬಹುಶಃ ಜಿನ್ನಾ ಆತ್ಮನೆ ಇವರಿಗೆ ಕೊಟ್ಟಿರಬೇಕು. ಸರ್ಕಾರಿ ಗುತ್ತಿಗೆಯಲ್ಲೂ ಮುಸಲ್ಮಾನರಿಗೆ ಮೀಸಲಾತಿ ಘೋಷಣೆ ಮಾಡಿದ್ದಾರೆ. ಇದು ಕೋಮವಾದ ತೋರಿಸುತ್ತೆ. ವೋಟ್ ಪಡೆಯಲು ಮಾತ್ರ ನಿಮಗೆ ಹಿಂದೂ ಬೇಕಾ? ಎಂದಿದ್ದಾರೆ.
ಹಿಂದೂವಾಗಿ ಹುಟ್ಟಿದೀನಿ ಹಿಂದೂವಾಗಿ ಸಾಯ್ತೀನಿ ಎಂದ ಕೆಪಿಸಿಸಿ ಅಧ್ಯಕ್ಷರಿಗೆ ಕೇಳ್ತೀನಿ ಹಿಂದೂಗಳಿಗೆ ಏನ್ ಕೊಟ್ಟಿದ್ದೀರಿ? ಮುಸ್ಲಿಂ ಲೀಗ್ ಪ್ರೇತಾತ್ಮ ಕಾಂಗ್ರೆಸ್ ಪಕ್ಷ ಆವರಿಸಿರಬೇಕು. ಇಲ್ಲವೇ ಕಾಂಗ್ರೆಸ್ ಪಕ್ಷ ಮುಸ್ಲಿಂ ಲೀಗ್ ಅಜೆಂಡಾ ಸ್ವೀಕಾರ ಮಾಡಿರಬೇಕು. ಇದೊಂದು ಕಮ್ಯುನಲ್ ಬಜೆಟ್ ಎಂದು ಸಿ.ಟಿ.ರವಿ ಆಕ್ರೋಶ ಹೊರಹಾಕಿದ್ದಾರೆ.