

ನವದೆಹಲಿ: ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಸತತ 5 ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದಿರುವ ಚೆನ್ನೈ ಸೂಪರ್ಕಿಂಗ್ಸ್ ಮತ್ತು ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಬೀಗಿರುವ ಲಖನೌ ಸೂಪರ್ಜೈಂಟ್ಸ್ ತಂಡಗಳು ಸೋಮವಾರ ಮುಖಾಮುಖಿ ಆಗಲಿವೆ. ಏಕನಾ ಸ್ಟೇಡಿಯಂನಲ್ಲಿ ನಡೆಯಲಿರುವ ಕಾದಾಟದಲ್ಲಿ ಗೆಲುವಿನ ಲಯ ಮುಂದುವರಿಸುವುದು ರಿಷಭ್ ಪಂತ್ ಬಳಗದ ಗುರಿಯಾಗಿದ್ದರೆ, ಎಂಎಸ್ ಧೋನಿ ಪಡೆ ಸೋಲಿನ ಸರಪಳಿ ಮುರಿದು ಪ್ಲೇಆಫ್ ಆಸೆ ಜೀವಂತ ಉಳಿಸಿಕೊಳ್ಳುವ ಹಂಬಲದಲ್ಲಿದೆ.
ಋತುರಾಜ್ ಗಾಯಕ್ವಾಡ್ ಗಾಯದಿಂದಾಗಿ ಹೊರಬಿದ್ದ ಬಳಿಕ ಧೋನಿ ನಾಯಕತ್ವ ವಹಿಸಿಕೊಂಡಿದ್ದರೂ, ಗೆಲುವಿನ ಹಳಿ ಏರಿಸಲು ಶಕ್ತರಾಗಿಲ್ಲ. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಸಿಎಸ್ಕೆ ಕೇವಲ 103 ರನ್ ಗಳಿಸಿ ಹೀನಾಯವಾಗಿ ಸೋತಿತ್ತು. ಇದೀಗ ಬ್ಯಾಟಿಂಗ್ ವಿಭಾಗದಿಂದ ಸುಧಾರಿತ ನಿರ್ವಹಣೆ ಬಾರದ ಹೊರತಾಗಿ ಸಿಎಸ್ಕೆ ಗೆಲುವಿನ ಹಳಿ ಏರುವುದು ಅಸಾಧ್ಯವೆನಿಸಿದೆ.
ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗುತ್ತಿರುವ ಲಖನೌ, ಕಳೆದ ಪಂದ್ಯದಲ್ಲಿ ಗುಜರಾತ್ ತಂಡ ಗೆಲುವಿನ ಓಟಕ್ಕೆ ಕಡಿವಾಣ ಹಾಕಿತ್ತು. ನಿಕೋಲಸ್ ಪೂರನ್ ಜತೆಗೆ ಏಡನ್ ಮಾರ್ಕ್ರಮ್, ಆಯುಷ್ ಬಡೋನಿ ಲಖನೌ ಬ್ಯಾಟಿಂಗ್ಗೆ ಬಲ ತುಂಬಿದ್ದಾರೆ. ಪುತ್ರಿಯ ಅನಾರೋಗ್ಯದಿಂದಾಗಿ ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಮಿಚೆಲ್ ಮಾರ್ಷ್ ಈ ಬಾರಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಮಾರ್ಷ್ ಗೈರಿನಲ್ಲಿ ಆರಂಭಿಕನಾಗಿ ಆಡಿದ್ದ ರಿಷಭ್ ಪಂತ್ 21 ರನ್ ಗಳಿಸಿದ್ದರು. ಇದು ಟೂರ್ನಿಯ 6 ಪಂದ್ಯಗಳಲ್ಲಿ ಅವರ ಗರಿಷ್ಠ ಗಳಿಕೆಯಾಗಿದ್ದು, ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ದೊಡ್ಡ ಇನಿಂಗ್ಸ್ನ ನಿರೀೆ ಹರಡಿದೆ.
ಸಿಎಸ್ಕೆಗೆ ಮಾಡು ಇಲ್ಲವೆ ಮಡಿ ಒತ್ತಡ
ಆಡಿರುವ ಮೊದಲ 6 ಪಂದ್ಯಗಳಲ್ಲಿ 1ರಲ್ಲಷ್ಟೇ ಗೆದ್ದು, 5ರಲ್ಲಿ ಸೋತಿರುವ ಸಿಎಸ್ಕೆ ತಂಡ ಪ್ಲೇಆ್ಗೆ ಏರಬೇಕಾದರೆ ಉಳಿದಿರುವ 8 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಾದರೂ ಗೆಲ್ಲಲೇಬೇಕಾಗಿದೆ. ಇನ್ನೊಂದು ಪಂದ್ಯ ಸೋತರೂ, ಧೋನಿ ಬಳಗದ ಪ್ಲೇಆ್ ಹಾದಿ ಜಟಿಲವಾಗಲಿದೆ.
ವಂಶ್ ಬೇಡಿಗೆ ಅವಕಾಶದ ಬೇಡಿಕೆ!
ಕಳೆದ ದೆಹಲಿ ಪ್ರೀಮಿಯರ್ ಲೀಗ್ನಲ್ಲಿ (ಡಿಪಿಎಲ್) ಮಿಂಚಿದ್ದ ಯುವ ವಿಕೆಟ್ ಕೀಪರ್&ಬ್ಯಾಟರ್ ವಂಶ್ ಬೇಡಿ ಅವರನ್ನು ಸಿಎಸ್ಕೆ ಕಳೆದ ಮೆಗಾ ಹರಾಜಿನಲ್ಲಿ 55 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಈಗ ಮೀಸಲು ಕೀಪರ್ ಆಗಿ ಅವರನ್ನು ಬೆಂಚು ಕಾಯಿಸುತ್ತಿದೆ. ಡಿಪಿಎಲ್ನಲ್ಲಿ ಆಡಿದ 9 ಪಂದ್ಯಗಳಲ್ಲಿ 22 ಸಿಕ್ಸರ್ ಸಹಿತ 221 ರನ್ ಸಿಡಿಸಿದ್ದ 22 ವರ್ಷದ ವಂಶ್ ಬೇಡಿ,
ಪ್ರಿಯಾಂಶ್ ಆರ್ಯರಂತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದ್ದಾರೆ. ಧೋನಿ ಈಗ ಸಿಎಸ್ಕೆ ನಾಯಕರೂ ಆಗಿರುವುದರಿಂದ ವಂಶ್ಗೆ ಕೀಪರ್ ಆಗಿ ಆಡಲು ಅವಕಾಶ ಸಿಗದು. ಹೀಗಾಗಿ ದೀಪಕ್ ಹೂಡಾ ಅಥವಾ ರಾಹುಲ್ ತ್ರಿಪಾಠಿ ಬದಲಿಗೆ ವಂಶ್ ಬೇಡಿ ಅವರನ್ನು ತಜ್ಞ ಬ್ಯಾಟರ್ ಆಗಿ ಆಡಿಸಬೇಕೆಂದು ಸಿಎಸ್ಕೆ ಅಭಿಮಾನಿಗಳಿಂದ ಬೇಡಿಕೆ ಬರುತ್ತಿದೆ.
ಮುಖಾಮುಖಿ: 5
ಎಲ್ಎಸ್ಜಿ: 3
ಸಿಎಸ್ಕೆ: 1
ರದ್ದು: 1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.