

ಚೆನ್ನೈ: 18ನೇ ಆವೃತ್ತಿಯ ಐಪಿಎಲ್ ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ಸುದ್ದಿಗಳು ಹೊಸ ಚರ್ಚೆಗೆ ನಾಂದಿ ಹಾಡಿವೆ. ಇದರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂದೇ ಹೆಸರುವಾಸಿಯಾಗಿರುವ ಮಹೇಂದ್ರ ಸಿಂಗ್ ಧೋನಿ ಅವರು 18ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಲಿದ್ದಾರಾ ಅಥವಾ ನಿವೃತ್ತಿ ಹೊಂದಲಿದ್ದಾರಾ ಎಂಬ ಬಗ್ಗೆ ವ್ಯಾಪಕವಾಗಿ ಚರ್ಚೆ ಮಾಡಲಾಗುತ್ತಿದೆ.
ಏಕೆಂದರೆ 17 ಆವೃತ್ತಿ ಆರಂಭವಾಗುವುದಕ್ಕೂ ಮುನ್ನ ಧೋನಿ ನಾಯಕನ ಸ್ಥಾನದಿಂದ ಕೆಳಗಿಳಿಯುವ ಮೂಲಕ ನಿವೃತ್ತಿಯಾಗುವ ಸುದ್ದಿಗೆ ಇಂಬು ನೀಡಿದ್ದರು. ಇದಾದ ಬಳಿಕ ಆರ್ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋತ ಬಳಿಕ ಧೋನಿ ನಿವೃತ್ತಿ ಹೊಂದಲಿದ್ದಾರೆ ಎಂದು ಹೇಳಲಾಗಿತ್ತಾದರು ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಹೊಸದೊಂದು ಸುದ್ದಿ ಕೇಳಿ ಬರುತ್ತಿದ್ದು, ಧೋನಿ ಈ ಬಾರಿಯ ಐಪಿಎಲ್ನಲ್ಲಿ ಆಡಬೇಕಾದರೆ ಐಪಿಎಲ್ ಮ್ಯಾನೇಜ್ಮೆಂಟ್ ಹಾಗೂ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುವುದಾಗಿ ವರದಿಯಾಗಿದೆ.
2025ರಲ್ಲಿ ಐಪಿಎಲ್ ಶುರುವಾಗುವುದಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಎಷ್ಟು ಆಟಗಾರರನ್ನು ಫ್ರಾಂಚೈಸಿ ಉಳಿಸಿಕೊಳ್ಳಬೇಕೆಂಬುದರ ಬಗ್ಗೆ ಬಿಸಿಸಿಐ ಹಾಗೂ ಐಪಿಎಲ್ ಮ್ಯಾನೇಜ್ಮೆಂಟ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಕ್ರಿಕ್ಬಜ್ ವರದಿ ಮಾಡಿರುವ ಪ್ರಕಾರ ಬಿಸಿಸಿಐ ಫ್ರಾಂಚೈಸಿಯಲ್ಲಿ 5-6 ಆಟಗಾರರನ್ನು ರಿಟೇನ್ ಮಾಡುವ ಅವಕಾಶ ಏನಾದರೂ ನೀಡದ್ದಲ್ಲಿ ಧೋನಿ ಸಿಎಸ್ಕೆಯಲ್ಲೇ ಮುಂದುವರೆಯಲಿದ್ದಾರೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಸಿಎಸ್ಕೆ ಫಾಂಚೈಸಿಯು ನಾಯಕ ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ ಹಾಗೂ ವಿದೇಶಿ ಆಟಗಾರರ ಕೋಟಾದಲ್ಲಿ ಶ್ರೀಲಂಕಾದ ಮಥೀಶ ಪಥಿರಾಣಾರನ್ನು ಉಳಿಸಿಕೊಳ್ಳಲು ಮುಂದಾಗಿದೆ.
ಜುಲೈ 31ರಂದು ನಡೆಯಲಿರುವ ಐಪಿಎಲ್ ತಂಡಗಳ ಮಾಲೀಕರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲು ಫ್ರಾಂಚೈಸಿಗಳು ಮುಂದಾಗಿದ್ದು, ಸಿಎಸ್ಕೆ ಫ್ರಾಂಚೈಸಿಯು ತಂಡದಲ್ಲಿ 5-6 ಆಟಗಾರರು ರಿಟೇನ್ ಮಾಡುವ ಬಗ್ಗೆ ಪ್ರಮುಖವಾಗಿ ಮಾತುಕತೆ ನಡೆಸಲಿದೆ ಎಂದು ಹೇಳಲಾಗಿದೆ. ಧೋನಿ ಆಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲು ಸಿಎಸ್ಕೆ ಫ್ರಾಂಚೈಸಿಯು ಮುಂದಾಗಿದ್ದು, ಬಿಸಿಸಿಐಗೆ ಈ ಒಂದು ಷರತ್ತನ್ನು ವಿಧಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.