ವಿಚಾರವಿಲ್ಲದೆ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಾರೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

Minister-N.Cheluvarayaswamy
Published on

ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಹಳ ದಿನಗಳ ನಂತರ ಬಂದಿದ್ದಾರೆ. ಏನು ವಿಚಾರವಿಲ್ಲದ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಈಗ ಮಾತನಾಡಿದ್ದಾರೆ. ಸರ್ಕಾರ ತಪ್ಪು ಮಾಡಿದ್ದರೆ ಅಥವ ಯಾರು ಅಪಮಾನ ಮಾಡಿ ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗುತ್ತೆ. ಆದ್ದರಿಂದ ಯಾರಿಗೆ ಶಿಕ್ಷೆ ಆಗುತ್ತೆ ನೋಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ರಾಜ್ಯಸರ್ಕಾರಕ್ಕೆ ಶ್ರೀ ಮಂಜುನಾಥಸ್ವಾಮಿ ಶಿಕ್ಷೆ ಕೊಡುತ್ತಾರೆನ್ನುವ ಎಚ್‌ಡಿಕೆ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಎಸ್‌ಐಟಿ ತನಿಖೆಯನ್ನು ಸ್ವಾಗತ ಮಾಡಿದ್ದಾರೆ. ಸಂಸ್ಥೆಯಿಂದ ಯಾವ ತಪ್ಪು ನಡೆದಿಲ್ಲ, ಇದು ನಿಲ್ಲಬೇಕು. ಇವಾಗ ತನಿಖೆ ನಡೆಸಿ ಮುಕ್ತಾಯ ಮಾಡುವುದು ಸೂಕ್ತ ವಿಚಾರ ಎನ್ನುವುದನ್ನು ಹೇಳಿದ್ದಾರೆ. ಅಸೆಂಬ್ಲಿಯಲ್ಲಿ ಆರ್.ಅಶೋಕ್ ಪಾಪಾ ತಡಬಡಾಯಿಸಿದ್ದರು. ಸುಳ್ಳು ಮಾಹಿತಿ ಕೊಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂತಲೂ ಹೇಳಿದ್ದರು. ಬಹುಶಃ ಬಹಳ ವರ್ಷದಿಂದ ಚರ್ಚೆಯಲ್ಲಿ ಇತ್ತು. ಇದನ್ನ ಅಂತಿಮ ಮಾಡಬೇಕಿತ್ತು. ಎಲ್ಲರ ಅಭಿಪ್ರಾಯ ಪಡೆದು ತನಿಖೆ ಆಗುತ್ತಿದೆ. ತನಿಖೆಗೆ ಹೊರಟಾಗ ಕುಮಾರಸ್ವಾಮಿ, ಅಶೋಕ್ ಮಾತನಾಡಿಲ್ಲ. ಎಸ್‌ಐಟಿ ಮಾಡಿದ ಬಳಿಕ ಇವಾಗ ಮಾತನಾಡುತ್ತಿದ್ದಾರೆ ಅಷ್ಟೇ ಎಂದರು.

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ಬಿಜೆಪಿ ವಿರೋಧ ವಿಚಾರಕ್ಕೆ ತಿರುಗೇಟು ನೀಡಿದ ಸಚಿವ ಸಿಆರ್‌ಎಸ್, ಏನು ಇಲ್ಲದಿದ್ದರೆ ಬಿಜೆಪಿಯವರು ಈ ರೀತಿ ಕ್ಯಾತೆ ತೆಗೆಯುತ್ತಾರೆ. ಈ ಹಿಂದೆ ನಿಸಾರ್ ಅಹಮದ್ ದಸರಾ ಉದ್ಘಾಟಿಸಿದ್ದಾರೆ. ಸಾಹಿತಿಗಳು ಸೇರಿ ಅನೇಕರು ಉದ್ಘಾಟನೆ ಮಾಡಿದ್ದಾರೆ. ಬಾನು ಮುಷ್ತಾಕ್ ಸಾಧನೆಗೆ ದೊಡ್ಡ ಗೌರವ ಇದೆ. ಅದಕ್ಕೆ ಅವರನ್ನ ದಸರಾ ಉದ್ಘಾಟನೆಗೆ ಸರ್ಕಾರ ಆಹ್ವಾನಿಸಿದೆ. ಏನು ವಿಚಾರ ಇಲ್ಲದಿದ್ದರೆ ಏನ್ನಾದರೂ ತೀಟೇ ಮಾಡುವುದು ವಿರೋಧ ಪಕ್ಷದ ಕೆಲಸ. ವಿರೋಧ ಪಕ್ಷದವರು ತೀಟೇ ಮಾಡಿದಾಗ ಸಾರ್ವಜನಿಕವಾಗಿ ಕೆಲವು ಭಿನ್ನಾಪ್ರಾಯ ಬರುತ್ತಾವೆ ಅಷ್ಟೇ. ಸಾರ್ವಜನಿಕರ ಭಿನ್ನಾಭಿಪ್ರಾಯ ಗೌರವಿಸುತ್ತೇವೆ. ಪ್ರತಿಯೊಬ್ಬರ ನಡೆ ಸಣ್ಣಪುಟ್ಟ ವ್ಯತ್ಯಾಸಗಳು ಇರುತ್ತವೆ ಎಂದ ಅವರು, ಜೆಡಿಎಸ್ ಧರ್ಮಸ್ಥಳ ಸತ್ಯ ಯಾತ್ರೆ ವಿಚಾರ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಸತ್ಯ ಇರಲಿಲ್ಲವಾ?. ಇವಾಗ ಸತ್ಯಕ್ಕೆ ಹೊಗುತ್ತಿದ್ದಾರಾ?. ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದರು.

ಸೆ.25 ರಿಂದ 28 ರವರಗೆ ನಾಲ್ಕು ದಿನ ಶ್ರೀರಂಗಪಟ್ಟಣ ದಸರಾ ನಡೆಯಲಿದೆ. ಅಧಿಕಾರಿಗಳ ಜತೆ ದಸರಾ ಸಂಬಂಧಿಸಿದಂತೆ ಚರ್ಚೆ ಮಾಡಲಾಗಿದೆ. ಅದ್ಧೂರಿಯಾಗಿ ದಸರಾ ಆಚರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲು ಹಾಗೂ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಈ ಬಾರಿಯ ಶ್ರೀರಂಗಪಟ್ಟಣ ದಸರಾ ವಿಶೇಷವಾಗಿ ಇರಲಿದೆ. ಉದ್ಘಾಟರ ಆಯ್ಕೆಯನ್ನು ಎಲ್ಲರ ಜತೆ ಚರ್ಚಿಸಿ ತೀರ್ಮಾನಿಸಿ ಸೂಕ್ತ ವ್ಯಕ್ತಿಯನ್ನ ಆಯ್ಕೆ ಮಾಡುತ್ತೇವೆ. ಮೆರವಣಿಗೆಗೆ ಆನೆಗಳನ್ನು ಕರೆತರುವ ಜವಾಬ್ದಾರಿ ಡಿಎಫ್‌ಒಗೆ ಕೊಟ್ಟಿದ್ದೇವೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಡುತ್ತೇವೆ. ಸ್ಥಳೀಯರನ್ನು ನಿರ್ಲಕ್ಷೃ ಮಾಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net