ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಕೋಟಿ ರೂ. ಪರಿಹಾರಕ್ಕೆ ಆದೇಶ

Published on

ಮಂಗಳೂರು: ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಆಶ್ರಿತರಿಗೆ ಕೋಟಿ ರೂಪಾಯಿ ಪರಿಹಾರ ನೀಡಲು ವಿಮಾ ಕಂಪೆನಿಗೆ ಆದೇಶಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶಾರಾದ ಲಕ್ಷ್ಮೀ ಜಿ.ಎಂ. ತೀರ್ಪು ನೀಡಿದ್ದಾರೆ.

ಪಣಂಬೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಮಹೇಶ್ ಭಟ್(40)ಎಂಬವರು 2018ರ ಮೇ 18ರಂದು ತನ್ನ ಮೋಟಾರು ಬೈಕ್‌ನಲ್ಲಿ ಕರ್ತವ್ಯಕ್ಕೆ ಹೋಗುತ್ತಿದ್ದಾಗ ಮಂಗಳೂರಿನ ಕೊಟ್ಟಾರ ಚೌಕಿ ಬಳಿ ರಾಜಸ್ಥಾನದ ನೋಂದಣಿಯ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಮಹೇಶ್ ಮಹೇಶ್ ಭಟ್ ಮೃತಪಟ್ಟಿದ್ದರು. ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಮೋಟಾರು ವಾಹನ ಅಪಘಾತ ಪರಿಹಾರ ಕಾಯಿದೆಯಡಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಎದುರುವಾದಿ ವಿಮಾ ಕಂಪನಿಯು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಹಳಷ್ಟು ವಾದಗಳನ್ನೊಡ್ಡಿದ್ದರೂ ಕೊನೆಗೆ ನ್ಯಾಯಾಲಯವು ಅರ್ಜಿದಾರರು ಹಾಜರು ಪಡಿಸಿದ ದಾಖಲಾತಿಗಳು ಹಾಗೂ ಮಂಡಿಸಿದ ವಾದ ವಿವಾದಗಳನ್ನು ಪರಿಗಣಿಸಿ ಒಂದು ಕೋಟಿ ಆರು ಲಕ್ಷ ರೂ.ಗಳ ಪರಿಹಾರವನ್ನು 2018 ರಿಂದ 2024ರ ತನಕ ಶೇಕಡಾ 6ರಷ್ಟು ಬಡ್ಡಿಯೊಂದಿಗೆ ಸೇರಿಸಿ ಒಟ್ಟು 1,35,00,000 ರೂ.ಗಳ ಪರಿಹಾರವನ್ನು ಅರ್ಜಿದಾರರಿಗೆ ನೀಡಲು ನ್ಯಾಯಾಲಯವು ಮಹತ್ವದ ಆದೇಶ ನೀಡಿತು. ಅರ್ಜಿದಾರರ ಪರವಾಗಿ ಮಂಗಳೂರಿನ ವಕೀಲ ಎ. ದಿನೇಶ್ ಭಂಡಾರಿ, ಕೆ.ಎಸ್.ಎನ್.ಅಡಿಗ, ಪ್ರೀತಿಕಾ ಕೆ.ಎಂ. ಹಾಗೂ ತೃಪ್ತಿರವರು ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net