ಎಚ್‌ಡಿಕೆ ಕುಟುಂಬದವರೆಲ್ಲ ರಾಜಕಾರಣ ಮಾಡ್ಲಿಲ್ವಾ?: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

Minister Cheluvarayaswami
Published on

ಮಂಡ್ಯ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮನೆಯವರೆಲ್ಲ ಸೇರಿಕೊಂಡು ರಾಜಕಾರಣ ಮಾಡುತ್ತಿರಲಿಲ್ಲವೇ?. ಪೂರ್ಣವಾಗಿ ಕುಟುಂಬದವರು, ರಾಜಕಾರಣಕ್ಕೆ ಸಂಬಂಧವೇ ಇಲ್ಲದೆ ಇರುವವವರು ರಾಜಕಾರಣ ಮಾಡಿದ್ದರು. ಆಗ ನಾವೇನಾದ್ರೂ ಕೇಳಿದ್ವಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯಸರ್ಕಾರ ವರ್ಗಾವಣೆ ದಂಧೆ ಮಾಡುತ್ತಿದೆ ಎನ್ನುವ ಎಚ್‌ಡಿಕೆ ಹೇಳಿಕೆ ಪ್ರತಿಕ್ರಿಯಿಸಿ, ಯತೀಂದ್ರ ಸಿದ್ದರಾಮಯ್ಯ ಸಿಎಂ ಜತೆ ವರ್ಗಾವಣೆ ಬಗ್ಗೆ ಮಾತನಾಡಬಾರದು ಎಂದು ಕುಮಾರಸ್ವಾಮಿ ಹೇಳಿದರೆ, ಎಚ್‌ಡಿಕೆ ಕುಟುಂಬದವರೆಲ್ಲ ರಾಜಕಾರಣ ಮಾಡಿರಲ್ಲಿಲ್ವಾ?. ಎಚ್.ಡಿ.ದೇವೇಗೌಡರ ಕುಟುಂಬ ಎಂದರೆ ಒಂದು ಗೌರವ ಇದೆ. ಆದ್ದರಿಂದ ದೊಡ್ಡವರಿಂದ ಮಾರ್ಗದರ್ಶನ ಪಡೆದುಕೊಂಡರೆ ಎಚ್‌ಡಿಕೆಯಿಂದ ಈ ರೀತಿ ತಪ್ಪು ಆಗಲ್ಲ ಎಂದು ಛೇಡಿಸಿದರು.

ಬಿಜೆಪಿ ಅವರು ಏನು ಮಾತಾಡುತ್ತಿಲ್ಲ. ಆದರೆ ಎಚ್‌ಡಿಕೆಯಷ್ಟೇ ಮಾತನಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ಎಚ್‌ಡಿಕೆ ಅವರನ್ನು ಬಿಜೆಪಿ ವಕ್ತಾರರನ್ನಾಗಿ ನೇಮಕ ಮಾಡಿರಬೇಕು. ಮಾತನಾಡಲು ಬಿಜೆಪಿ ಬಿಟ್ಟುಕೊಟ್ಟಿರಬೇಕು. ನಮ್ಮ ಉಚಿತ ಯೋಜನೆಗಳ ಬಗ್ಗೆ ಜನರಿಗೆ ಖುಷಿ ಇದೆ. ಆದ್ದರಿಂದ ಈ ಖುಷಿಯನ್ನು ತಣ್ಣಗೆ ಮಾಡಲು ಎಚ್‌ಡಿಕೆ ಈ ರೀತಿ ಮಾತಾಡುತಿದ್ದಾರೆ. ಅವರು ಸಿಎಂ ಆದಾಗ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಇದರ ಬಗ್ಗೆ ಏಕೆ ಎಂದು ಕೇಳಿದರೆ ಸಮ್ಮಿಶ್ರ ಸರ್ಕಾರವೆಂದು ಹೇಳುತ್ತಿದ್ದರು. ಆಗ ಸಿಎಂ ಕುರ್ಚಿ ಇದ್ದಿದ್ದು ಒಂದೇ ಇದ್ದಿದ್ದು, ಎರಡು ಅಲ್ಲ. ಅವರ ಪೆನ್‌ನಲ್ಲಿಯೇ ಸಹಿ ಹಾಕುತ್ತಿದ್ದರು. ಹಣಕಾಸಿನ ಸಚಿವರು ಅವರೆ ಆಗಿದ್ದರೂ, ಕೊಟ್ಟ ಭರವಸೆಗಳನ್ನು ಈಡೇರಿಸಲು ಯಾವುದೇ ತೊಂದರೆ ಇರಲಿಲ್ಲ ಎಂದು ಟೀಕಿಸಿದರು.

ಈಗ ನಾನು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಇದರಿಂದಾಗಿ ಜೆಡಿಎಸ್ ಮತ್ತು ಬಿಜೆಪಿಗೆ ಲೋಕಸಭೆ ಚುನಾವಣೆ ಕಥೆ ಏನು ಎಂಬ ಆತಂಕ ಬಂದಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ದಿಕ್ಕು ತಪ್ಪಿಸಲು ಹೇಳಿಕೆ ಕೊಡುತಿದ್ದಾರೆ. ಯಾರೋ ಕುಮಾರಸ್ವಾಮಿಗೆ ಹೇಳಿರಬೇಕು, ಅದಕ್ಕೆ ಮಾತನಾಡುತ್ತಿದ್ದಾರೆ. ವರ್ಗಾವಣೆಗಳು ಎಲ್ಲರ ಕಾಲದಲ್ಲೂ ಆಗಿವೆ. ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಎಲ್ಲರ ಕಾಲದಲ್ಲೂ ವರ್ಗಾವಣೆಗಳು ಆಗಿವೆ. ಆದ್ದರಿಂದ ವರ್ಗಾವಣೆ ದಂಧೆ ಎಂದು ಮಾತನಾಡುವುದು ಮಾಜಿ ಸಿಎಂ ಆದವರಿಗೆ ಗೌರವ ತರಲ್ಲ ಎಂದು ತಿರುಗೇಟು ನೀಡಿದರು.

ಎಚ್.ಡಿ.ದೇವೇಗೌಡ ಅವರು ಈ ರಾಜ್ಯದ ಹಿರಿಯ ರಾಜಕಾರಣಿ. ಅವರ ಬಳಿ ಮಾಧ್ಯಮದವರು ಕೇಳಿ ನಿಮ್ಮ ಮಗ ಹೀಗೆ ಹೇಳುತ್ತಾ ಇದಾರೆ ಎಂದು ಕೇಳಿ. ಅವರು ಏನಾದರೂ ಹೇಳಿದರೆ, ನಾವು ಹೇಳುತ್ತೇವೆ. ಈಗಾಗಲೇ ನಾವು ಅನೇಕರಿಗೆ ಉತ್ತರ ಕೊಡದು ಬಿಟ್ಟಿದ್ದೇವೆ. ಮುಂದೆ ಎಚ್‌ಡಿಕೆ ಅವರಿಗೂ ಉತ್ತರ ಕೊಡುವುದನ್ನು ಬಿಟ್ಟು ಬಿಡುತ್ತೇವೆ. ದೇವೇಗೌಡರ ಜತೆ ನಾನು ಇದ್ದಾಗ ಹೇಳುತ್ತಿದ್ದು ಈಗ ಹೇಳುವುದಕ್ಕೆ ಆಗಲ್ಲ. ದೇವೇಗೌಡರು, ಕುಮಾರಸ್ವಾಮಿ ಮತ್ತು ನಾನು ಮೂರು ಜನ ಊಟ ಮಾಡುತ್ತಿದ್ದಾಗ ಹಲವು ವಿಚಾರ ಹೇಳುತ್ತಿದ್ದರು. ಅವುಗಳನ್ನು ಈಗ ಹೇಳುವುದಕ್ಕೆ ಆಗುವುದಿಲ್ಲ. ಖಾಸಗಿ ವಿಚಾರ ಚರ್ಚೆಗಳನ್ನು ಈಗ ಹೇಳುವುದು ಸರಿಯಲ್ಲ. ಒಂದು ವೇಳೆ ದೇವೇಗೌಡರು ವರ್ಗಾವಣೆ ವಿಚಾರ ತಪ್ಪು ಎಂದರೆ ಒಪ್ಪಿಕೊಳ್ಳುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net