

Congress: ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಚರ್ಚೆ ವೇಳೆ ಮಾಜಿ ಪ್ರಧಾನಿ ಜವಾಹಲ್ ಲಾಲ್ ನೆಹರುರನ್ನ ಟೀಕಿಸಿದ್ದಕ್ಕಾಗಿ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಇಂದಿನ ವೈಫಲ್ಯಗಳಿಗೆ ಅವರ ಬಳಿ ಉತ್ತರವಿಲ್ಲ, ಅದಕ್ಕೆ ದಿಕ್ಕು ತಪ್ಪಿಸುವ, ಗಮನ ಬೇರೆಡೆ ಸೆಳೆಯುವ ಹಾಗೂ ಮಾನಹಾನಿ ಮಾಡುವ ಕೆಲಸ ಮಾಡ್ತಾರೆ ಎಂದು ಬುಧವಾರ(ಜು. 30) ಕಿಡಿಕಾರಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, "ನಿನ್ನೆ ಲೋಕಸಭೆಯಲ್ಲಿ ಜವಾಹರಲಾಲ್ ನೆಹರು ಕುರಿತು ಪ್ರಧಾನಿ ಮತ್ತು ಗೃಹಮಂತ್ರಿ ಇಬ್ಬರೂ ಮಾತನಾಡಿದ್ದು ನೋಡಿದ್ರೆ ಅವರು ವೈದ್ಯಕೀಯ ಭಾಷೆಯಲ್ಲಿ ಕರೆಯುವ ಒಡಿಸಿ (ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್) ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಬಹುದು. ರಾಜ್ಯಸಭೆಯಲ್ಲಿಯೂ ಇದು ಪುನರಾವರ್ತನೆಯಾಗುವ ಸಾಧ್ಯತೆಯಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಗೃಹಸಚಿವ ಅಮಿತ್ ಶಾ ತಾವೊಬ್ಬ ಇತಿಹಾಸಕಾರ ಎಂದು ತೋರಿಸಿಕೊಳ್ತಿದ್ದಾರೆ. ಆದರೆ, ಅವರು ಭಾರತದ 2ನೇ ವೀಕೃತ ಇತಿಹಾಸಕಾರ. ಇದು ಎಂಟೈರ್ ಪೊಲಿಟಿಕಲ್ ಸೈನ್ಸ್ನಲ್ಲಿ ಪದವಿ ಪಡೆದ ವ್ಯಕ್ತಿಗೆ ಮಾತ್ರ ಸೀಮಿತವಾಗಿರುತ್ತದೆ" ಎಂದು ವ್ಯಂಗ್ಯವಾಡಿದರು.
ಲೋಕಸಭೆಯಲ್ಲಿ ಪ್ರಧಾನಿ ಮತ್ತು ಶಾ ಹೇಳಿದ್ದೇನು?
ಆಪರೇಷನ್ ಸಿಂಧೂರ ಕುರಿತಾದ ಚರ್ಚೆಯಲ್ಲಿ ನಿನ್ನೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿ "ಜವಾಹರಲಾಲ್ ನೆಹರು ನೇತೃತ್ವದ ಕಾಂಗ್ರೆಸ್ ಸರ್ಕಾರ ಅಕ್ಸಾಯ್ ಚಿನ್‌ನ 38,000 ಕಿ.ಮೀ.ಗೂ ಹೆಚ್ಚು ಪ್ರದೇಶವನ್ನು ಕಳೆದುಕೊಂಡಿತು. ಪಾಕ್ ಜೊತೆ ಸಿಂಧೂ ನದಿ ನೀರು ಒಪ್ಪಂದಕ್ಕೆ ಸಹಿ ಹಾಕಿ ದೊಡ್ಡ ತಪ್ಪು ಮಾಡಿದ್ದರು" ಎಂದು ಟೀಕಿಸಿದ್ದರು.
"ಪಿಒಕೆಯನ್ನು ಇನ್ನೂ ಯಾಕೆ ವಾಪಸ್ ಪಡೆದಿಲ್ಲ ಎಂದು ಕೇಳುವ ಮೊದಲು ಕಾಂಗ್ರೆಸ್ ಮೊದಲು ಅದನ್ನು ಯಾಕೆ ಬಿಟ್ಟು ಕೊಟ್ಟಿತ್ತು. ನೆಹರೂ ಅವರಿಂದ ಹಿಡಿದು ಎಲ್ಲಾ ಕಾಂಗ್ರೆಸ್ ಸರ್ಕಾರಗಳು ಮಾಡಿದ ತಪ್ಪುಗಳ ನೋವನ್ನು ಭಾರತ ಇನ್ನೂ ಅನುಭವಿಸುತ್ತಿದೆ" ಎಂದು ವಾಗ್ದಾಳಿ ನಡೆಸಿದ್ದರು.
ಇದೇ ವೇಳೆ ಮಧ್ಯಪ್ರವೇಶಿಸಿ ಪಿಓಕೆ ಸೃಷ್ಟಿಗೆ ಯಾರು ಕಾರಣ? ಪ್ರಮುಖ ವಿರೋಧ ಪಕ್ಷ ತೆಗೆದುಕೊಂಡ ದೊಡ್ಡ ತಪ್ಪಿನಿಂದ ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಯಾಯಿತು. ಇದು ದೇಶದ ಮೊದಲ ಪ್ರಧಾನಿ ನೆಹರೂ ಅವರ ಕೊಡುಗೆ. 1948ರಲ್ಲಿ ನಮ್ಮ ಸಶಸ್ತ್ರ ಪಡೆಗಳು ನಿರ್ಣಾಯಕ ಹಂತದಲ್ಲಿದ್ದವು. ಸರ್ದಾರ ಪಟೇಲ್ ಬೇಡ ಅಂದ್ರು ನೆಹರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಕದನ ವಿರಾಮ ಘೋಷಿಸಿದ್ದರು ಎಂದು ಗೃಹಮಂತ್ರಿ ಅಮಿತ್ ಶಾ ಟೀಕಿಸಿದ್ದರು.(ಏಜೆನ್ಸೀಸ್)